ಬೆಂಗಳೂರು: ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರೊಂದಿಗೆ ನಡೆಸಿದ ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಲೋಕಾಯುಕ್ತ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.
ಅಕ್ರಮ ಆಸ್ತಿ ಸಂಪಾದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಜಮೀರ್ ಅಹ್ಮದ್ ಖಾನ್ ಅವರ ಆದಾಯದ ಮೂಲಗಳನ್ನು ಪರಿಶೀಲಿಸಿದಾಗ ಸಾಲ ನೀಡಿದವರ ಪಟ್ಟಿಯಲ್ಲಿ ದಿನೇಶ್ ಗುಂಡೂರಾವ್ ಅವರ ಹೆಸರು ಉಲ್ಲೇಖಿಸಲಾಗಿದೆ. ಹೀಗಾಗಿ ದಾಖಲೆಗಳೊಂದಿಗೆ ವಿಚಾರಣೆಗೆ ಹಾಜರಾಗುವಂತೆ ಪ್ರಕರಣದ ತನಿಖಾಧಿಕಾರಿಯಾಗಿರುವ ಲೋಕಾಯುಕ್ತ ಡಿವೈಎಸ್ಪಿ ಸತೀಶ್ ಕುಮಾರ್ ಅವರು ದಿನೇಶ್ ಗುಂಡೂರಾವ್ ಗೆ ನೋಟಿಸ್ ನೀಡಿದ್ದಾರೆ.
ಜಮೀರ್ ಅಹ್ಮದ್ ಅವರ ಬಳಿ 2005 ರಿಂದ ಹಣಕಾಸು ವ್ಯವಹಾರ ವ್ಯಾಪಾರ ವಹಿವಾಟು ನಡೆಸಿದವರ ದಾಖಲೆಗಳನ್ನು ಮುಂದಿಟ್ಟುಕೊಂಡು ವಿಚಾರಣೆಗೆ ಕರೆಸಿ ಹೇಳಿಕೆ ದಾಖಲಿಸಲಾಗುತ್ತಿದೆ. ಜಮೀರ್ ಅಹ್ಮದ್ ಖಾನ್ ಮತ್ತು ದಿನೇಶ್ ಗುಂಡೂರಾವ್ ಅವರ ನಡುವೆ ಕೆಲವು ಹಣಕಾಸು ವಹಿವಾಟು ನಡೆದಿದ್ದು, ಈ ಬಗ್ಗೆ ಮಾಹಿತಿ ಮತ್ತು ಸ್ಪಷ್ಟೀಕರಣ ನೀಡಲು ದಿನೇಶ್ ಗುಂಡೂರಾವ್ ಅವರಿಗೆ ವಿಚಾರಣೆ ನೋಟಿಸ್ ನೀಡಲಾಗಿದೆ.
ವಿಚಾರಣೆಗೆ ಹಾಜರಾಗಿ ದಾಖಲೆ ಹಾಜರುಪಡಿಸಲು ಸಚಿವ ದಿನೇಶ್ ಗುಂಡೂರಾವ್ ಅವರು ಸಮಯ ಕೋರಿದ್ದಾರೆ ಎಂದು ಹೇಳಲಾಗಿದೆ. ಇದೇ ಪ್ರಕರಣದಲ್ಲಿ ಕೆಲವು ದಿನಗಳ ಹಿಂದೆ ನಟಿ ರಾಧಿಕಾ ಕುಮಾರಸ್ವಾಮಿ, ಉದ್ಯಮಿ ಗುಜರಿ ಬಾಬು ಅಲಿಯಾಸ್ ಯೂಸೂಫ್ ಶರೀಫ್ ಅವರನ್ನು ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಲಾಗಿತ್ತು.