ಬೆಂಗಳೂರು: ಹೋಟೆಲ್, ವಸತಿಗೃಹಗಳಿಗೆ ಸಿಎಲ್ 7 ಅಬಕಾರಿ ಲೈಸೆನ್ಸ್ ನೀಡಿಕೆ ಸರಳೀಕರಣಗೊಳಿಸಲಾಗಿದೆ. ಅನಗತ್ಯ ವಿಳಂಬ, ಲಂಚಾವತಾರ ತಪ್ಪಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಪರವಾನಿಗೆ ಮಂಜೂರಾತಿಗೆ ಕಾಲಮಿತಿ ನಿಗದಿಪಡಿಸಿದೆ.
ಸಿಎಲ್ 7 ಅಬಕಾರಿ ಪರವಾನಗಿ ಮಂಜೂರಾತಿ ಪ್ರಕ್ರಿಯೆ ಸರಳೀಕೃತಗೊಳಿಸಲು ಅಬಕಾರಿ ಇಲಾಖೆಯಿಂದ ಹೊಸ ತಂತ್ರಾಂಶ ರೂಪಿಸಲಾಗಿದೆ. ಲೈಸನ್ಸ್ ಕೋರಿ ಅರ್ಜಿ ಸಲ್ಲಿಸಿದವರಿಗೆ ತಿಂಗಳೊಳಗೆ ಮದ್ಯದಂಗಡಿ ಆರಂಭಿಸಲು ಪರವಾನಗಿ ನೀಡಲಾಗುವುದು. ಈ ಹಿಂದೆ ಸಿಎಲ್ 7 ಲೈಸೆನ್ಸ್ ಕೋರಿ ಅಬಕಾರಿ ಇನ್ಸ್ಪೆಕ್ಟರ್ ಗೆ ಅರ್ಜಿ ಸಲ್ಲಿಸಬೇಕಿತ್ತು. ಇನ್ಸ್ಪೆಕ್ಟರ್ ಅರ್ಜಿ ಪರಿಶೀಲಿಸಿದ ಬಳಿಕ ಮುಂದಿನ ಪ್ರಕ್ರಿಯೆಗೆ ಡೆಪ್ಯೂಟಿ ಸೂಪರಿಂಟೆಂಡೆಂಟ್ ಗೆ ಕಳುಹಿಸುತ್ತಿದ್ದರು. ಅವರ ಪರಿಶೀಲನೆ ಬಳಿಕ ಅರ್ಜಿಯು ಸೂಪರಿಂಟೆಂಡೆಂಟ್ ಲಾಗಿನ್ ಗೆ ಹೋಗುತ್ತಿತ್ತು. ನಂತರ ಸನ್ನದು ಮಂಜೂರಾತಿ ಪೂರ್ವಾನುಮತಿಗೆ ಶಿಫಾರಸು ಮಾಡಲು ಸೂಪರಿಂಟೆಂಡೆಂಟ್ ಗಳು ಜಿಲ್ಲಾಧಿಕಾರಿಗೆ ಅರ್ಜಿ ರವಾನಿಸುತ್ತಿದ್ದರು. ಜಿಲ್ಲಾಧಿಕಾರಿಗಳು ಅರ್ಜಿ ಸಲ್ಲಿಸಿ ಅಬಕಾರಿ ಇಲಾಖೆ ಆಯುಕ್ತರಿಗೆ ಕಳುಹಿಸುತ್ತಿದ್ದರು. ಅಬಕಾರಿ ಉಪ ಆಯುಕ್ತರು ಅರ್ಜಿ ಪರಿಶೀಲಿಸಿದ ಬಳಿಕ ಸನ್ನದು ಮಂಜೂರಾತಿಗೆ ಅನುಮೋದನೆ ಕೊಡಲು ಅಬಕಾರಿ ಇಲಾಖೆ ಆಯುಕ್ತರ ಮುಖ್ಯ ಕಚೇರಿಗೆ ಕಳುಹಿಸುತ್ತಿದ್ದರು. ಅರ್ಜಿದಾರರ ಬಳಿ ಕೆಲವು ಅಧಿಕಾರಿಗಳು ಲಂಚಕ್ಕೆ ಬೇಡಿಕೆ ಇಡುತ್ತಿದ್ದರು. ಲಂಚ ಕೊಡದಿದ್ದರೆ ಅನಗತ್ಯ ನೆಪ ಹೇಳಿ ಅರ್ಜಿಗಳನ್ನು ವಿಲೇವಾರಿ ಮಾಡದೆ ಸತಾಯಿಸುತ್ತಿದ್ದರು. ಕೆಲವೊಮ್ಮೆ ವರ್ಷಗಟ್ಟಲೆ ಕಚೇರಿಯಿಂದ ಕಚೇರಿಗೆ ಅಲೆದರೂ ಲೈಸೆನ್ಸ್ ಸಿಗುತ್ತಿರಲಿಲ್ಲ. ಈ ವಿಳಂಬ ತಪ್ಪಿಸಲು ಅಬಕಾರಿ ಇಲಾಖೆ ಸನ್ನದು ಪ್ರಕ್ರಿಯೆ ಸರಳಗೊಳಿಸಿದೆ.
ಕೆಳಹಂತದ ಅಧಿಕಾರಿಗಳಿಗೆ ಇದ್ದ ಅಧಿಕಾರವನ್ನು ಮೊಟಕುಗೊಳಿಸಲಾಗಿದೆ. ಹೊಸ ನಿಯಮಾವಳಿಯಂತೆ ಅರ್ಜಿದಾರರು ಆನ್ಲೈನ್ ನಲ್ಲಿ ನೇರವಾಗಿ ಅಬಕಾರಿ ಉಪ ಆಯುಕ್ತರಿಗೆ ಅರ್ಜಿ ಸಲ್ಲಿಸಬಹುದು. ಸಲ್ಲಿಕೆಯಾದ ಅರ್ಜಿಯನ್ನು ಉಪ ಆಯುಕ್ತರು ಕಡ್ಡಾಯವಾಗಿ 7 ದಿನದೊಳಗೆ ಪರಿಶೀಲಿಸಿ ಜಿಲ್ಲಾಧಿಕಾರಿಗೆ ರವಾನಿಸಬೇಕು. ನಂತರ ಜಿಲ್ಲಾಧಿಕಾರಿ 5 ದಿನದೊಳಗೆ ಎಲ್ಲವನ್ನು ಪರಿಶೀಲಿಸಿ ಪರವಾನಿಗೆ ಮಂಜೂರಾತಿಗೆ ಅಬಕಾರಿ ಇಲಾಖೆ ಆಯುಕ್ತರ ಕೇಂದ್ರ ಕಚೇರಿಗೆ ಕಳುಹಿಸಬೇಕು. ಅಂತಿಮವಾಗಿ ನಿಯಮದಂತೆ ಅರ್ಜಿ ಸರಿ ಇದ್ದಲ್ಲಿ ಆಯುಕ್ತರು ಲೈಸೆನ್ಸ್ ಮಂಜೂರಾತಿ ನೀಡಬೇಕು. ಇಲ್ಲವಾದರೆ ಅರ್ಜಿ ತಿರಸ್ಕರಿಸಬೇಕು. ಒಂದು ತಿಂಗಳೊಳಗೆ ಸೂಕ್ತ ಕಾರಣ ನೀಡಿ ಅರ್ಜಿ ಸರಿ ಇದ್ದರೆ ಪುರಸ್ಕರಿಸಿ ಲೈಸೆನ್ಸ್ ನೀಡಬೇಕು. ಇಲ್ಲವಾದಲ್ಲಿ ತಿರಸ್ಕರಿಸಬೇಕು ಎಂದು ಹೇಳಲಾಗಿದೆ.