ಸಾಮಾಜಿಕ ಹಾಗೂ ಶೈಕ್ಷಣಿಕ ಸ್ಥಿತಿ ಸಮೀಕ್ಷೆ: ಯಾವುದೇ ಲೋಪವಾಗದಂತೆ ಎಚ್ಚರಿಕೆ ವಹಿಸುವಂತೆ D.C ಆದೇಶ

ಬೆಂಗಳೂರು : ರಾಜ್ಯ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಯಾದ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ನಾಗರಿಕರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗಳ ಬಗ್ಗೆ ನಡೆಸಲಾಗುವ ಸಮೀಕ್ಷಾ ಕಾರ್ಯದಲ್ಲಿ ಯಾವುದೇ ಲೋಪವಾಗದಂತೆ ಎಚ್ಚರಿಕೆ ವಹಿಸಿ, ಕೆಲಸ ಮಾಡುವಂತೆ ಅಧಿಕಾರಿಗಳಿಗೆ ಬೆಂಗಳೂರು ನಗರ ಜಿಲ್ಲಾಧಿಕಾರಿಗಳಾದ ಜಿ ಜಗದೀಶ ಅವರು ಸೂಚಿಸಿದರು.

ರಾಜ್ಯದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸುವ ಸಂಬಂಧ ರಚಿಸಲಾಗಿರುವ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸದಸ್ಯರೊಂದಿಗೆ ಇಂದು ತಮ್ಮ ಕಚೇರಿಯಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸೆಪ್ಟೆಂಬರ್ 20 ರಿಂದ ಅಕ್ಟೋಬರ್ 7ರವರೆಗೆ ನಡೆಯಲಿರುವ ಈ ಸಮೀಕ್ಷಾ ಕಾರ್ಯ ಪ್ರಾರಂಭಗೊಳ್ಳುವ ಮುನ್ನ ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಪ್ರತಿ ಕುಟುಂಬವನ್ನು ಗುರುತಿಸಲು ಜಿಯೋ ಟ್ಯಾಗಿಂಗ್ ಕಾರ್ಯವನ್ನು ಕೈಗೊಳ್ಳಲಾಗಿದ್ದು ಸೆಪ್ಟೆಂಬರ್ 12 ರೊಳಗಾಗಿ ಈ ಕಾರ್ಯವನ್ನು ಪೂರ್ಣಗೊಳಿಸುವಂತೆ ಬೆಸ್ಕಾಂ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.

ಇದೀಗ ಬೆಂಗಳೂರು ನಗರ ಜಿಲ್ಲೆಯಲ್ಲಿ ಒಟ್ಟು ಸುಮಾರು 70ಲಕ್ಷ ವಿದ್ಯುತ್ ಸಂಪರ್ಕಗಳು ಕಾರ್ಯನಿರ್ವಹಿಸುತ್ತಿದ್ದು ಅವುಗಳಲ್ಲಿ ಶೇಕಡ 20ರಷ್ಟು ಮಾತ್ರ ಜಿಯೋ ಟ್ಯಾಗಿಂಗ್ ಕಾರ್ಯ ಪೂರ್ಣಗೊಂಡಿರುತ್ತದೆ ಎಂದು ಬೆಸ್ಕಾಂ ಅಧಿಕಾರಿ ಸಭೆಗೆ ಮಾಹಿತಿ ನೀಡಿದರು.

ಜಿಯೋ ಟ್ಯಾಗಿಂಗ್ ಆಧಾರದ ಮೇಲೆ ವಿವಿಧ ಬ್ಲಾಕ್ ಗಳನ್ನು ರಚಿಸಿ ಗಣತಿದಾರರನ್ನು ಬ್ಲಾಕ್ ಗಳ ಅನ್ವಯ ನಿಯೋಜಿಸಲಾಗುವುದು. ಪ್ರಸ್ತುತ ಪ್ರತಿ 150 ಜಿಯೋ ಟ್ಯಾಗಿಂಗ್ ಗೆ ಒಬ್ಬ ಗಣತಿದಾರರನ್ನು ನೇಮಿಸಲು ತಿಳಿಸಲಾಗಿದೆ. ಆದರೆ ಈ ಸಮೀಕ್ಷೆಯಲ್ಲಿ ಕಲೆ ಹಾಕಬೇಕಾಗಿರುವ ಮಾಹಿತಿಯ ಒಟ್ಟು 67 ಅಂಶಗಳಿದ್ದು ಪೂರ್ಣಗೊಳಿಸಲು ಸರಾಸರಿ ಒಂದು ಗಂಟೆ ಅವಶ್ಯವಿರುತ್ತದೆ. ಅದರಂತೆ ಒಬ್ಬ ಗಣತಿದಾರನು ಒಂದು ದಿನದಲ್ಲಿ ಗರಿಷ್ಠ ನಾಲ್ಕರಿಂದ ಐದು ಮನೆಗಳನ್ನು ಮಾತ್ರ ಪೂರ್ಣಗೊಳಿಸಬಹುದಾಗಿದೆ. ಅದರಂತೆ 150 ಮನೆಗಳನ್ನು ಓರ್ವ ಗಣತಿದಾರರಿಗೆ ನಿಯೋಜಿಸಿದರೆ ಸಮೀಕ್ಷಾ ಕಾರ್ಯವನ್ನು ಪೂರ್ಣಗೊಳಿಸಲು ಅವರಿಗೆ ಕನಿಷ್ಠ 10 ದಿನಗಳಾದರೂ ಬೇಕಾಗುತ್ತದೆ. ಇದರಿಂದಾಗಿ ಸಮೀಕ್ಷಾ ಕಾರ್ಯವನ್ನು ಪೂರ್ಣಗೊಳಿಸಲು ಸಮಯದ ಅಭಾವ ಎದುರಾಗಬಹುದು ಎಂದು ಬೆಂಗಳೂರು ನಗರ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಯತೀಶ್ ಆರ್ ಅವರು ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು ನಿಗದಿತ ಅವಧಿಯೊಳಗೆ ಸಮೀಕ್ಷೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಗಣತಿದಾರರನ್ನು ನೇಮಿಸಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಆನೇಕಲ್ ತಾಲ್ಲೂಕಿನ ಹಕ್ಕಿಪಿಕ್ಕಿ ಕಾಲೋನಿ ಹಾಗೂ ರಾಗಿಹಳ್ಳಿಯಲ್ಲಿ ವಾಸಿಸುವ ಪ್ರದೇಶಗಳು ನೆಟ್ ವರ್ಕ್ ಶ್ಯಾಡೋ ಪ್ರದೇಶವಾಗಿದ್ದು, ಕೆಲವು ಸ್ಲಂ ಪ್ರದೇಶಗಳಲ್ಲಿಯೂ ಅಧಿಕೃತ ವಿದ್ಯುತ್ ಸಂಪರ್ಕ ಇಲ್ಲದಿದ್ದು, ಇಂತಹ ಪ್ರದೇಶಗಳು ಸಮೀಕ್ಷೆಯಿಂದ ಹೊರಗುಳಿಯದಂತೆ ಎಚ್ಚರ ವಹಿಸಬೇಕು ಎಂದು ತಿಳಿಸಿದರು.

ಸಮೀಕ್ಷಾ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕಾದ ಗಣತಿದಾರರು, ಮೇಲ್ವಿಚಾರಕರು ಹಾಗೂ ಅವರಿಗೆ ತರಬೇತಿ ನೀಡಬೇಕಾದ ಮಾಸ್ಟರ್ ಟ್ರೈನರ್ ಗಳನ್ನು ಸೂಕ್ತ ಸಂಖ್ಯೆಯಲ್ಲಿ ಪಟ್ಟಿಮಾಡಿ ನಾಳೆ ಒಳಗಾಗಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಒದಗಿಸುವಂತೆ ಶಾಲಾ ಶಿಕ್ಷಣ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.

ಪರಿಶಿಷ್ಟ ಜಾತಿ ಗಣತಿ ಕಾರ್ಯದಲ್ಲಿ ತೊಡಗಿಸಿಕೊಳ್ಳಲಾಗಿದ್ದ ಎಲ್ಲಾ ಸಿಬ್ಬಂದಿಯನ್ನು ಪ್ರಸ್ತುತ ಈ ಸಮೀಕ್ಷೆಯಲ್ಲಿ ಸಹ ಕಡ್ಡಾಯವಾಗಿ ನಿಯೋಜಿಸಿಕೊಂಡು, ಅದರೊಂದಿಗೆ ಅಗತ್ಯವಿರುವ ಹೆಚ್ಚುವರಿ ಸಿಬ್ಬಂದಿಯನ್ನೂ ಸಹ ನಿಯೋಜಿಸಿಕೊಳ್ಳುವಂತೆ ಅಧಿಕಾರಿಗಳಿಗೆ ಅವರು ಸಲಹೆ ನೀಡಿದರು.

ತಾಲೂಕು ಮಟ್ಟದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗಳು ಅಲ್ಲಿಯ ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಪಟ್ಟಿಯನ್ನು ಕೂಡಲೇ ಸಿದ್ಧಪಡಿಸುವಲ್ಲಿ ಸಹಕರಿಸುವಂತೆ ಅವರು ತಿಳಿಸಿದರು.

ಸಮೀಕ್ಷಾ ಕಾರ್ಯದ ಸಂದರ್ಭದಲ್ಲೇ ಒಟ್ಟು ಜನಸಂಖ್ಯೆ ಮತ್ತು ವಲಸೆ ಬಂದಿರುವ ಜನರ ಸಮೀಕ್ಷೆ ನಡೆಸುವ ಬಗ್ಗೆ, ದ್ವಂದ್ವತೆ ಇದೆ. ಈ ಸಂಬಂಧ ಸಂಪೂರ್ಣ ಮಾರ್ಗಸೂಚಿ ಈವರೆಗೂ ಸಿದ್ಧವಾಗಿಲ್ಲದ ಕಾರಣ ಸರ್ಕಾರದಿಂದ ಸ್ಪಷ್ಟ ನಿರ್ದೇಶನ ಪಡೆಯುವಂತೆ ಇಲಾಖೆ ಅಧಿಕಾರಿಗಳಿಗೆ ಅವರು ತಿಳಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿಗಳಾದ ಡಾ.ಜಗದೀಶ್ ಕೆ. ನಾಯಕ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗಳಾದ ನಿರುಪಮಾ ಮೌಳಿ, ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪ ನಿರ್ದೇಶಕರಾದ ಪಲ್ಲವಿ ಹೊನ್ನಾಪುರ, ಬೆಂಗಳೂರು ದಕ್ಷಿಣ ಉಪ ವಿಭಾಗಾಧಿಕಾರಿಗಳಾದ ವಿಶ್ವನಾಥ್, ಶಾಲಾ ಶಿಕ್ಷಣ ಉಪ ನಿರ್ದೇಶಕರು, ಸೇರಿದಂತೆ ಜಿಲ್ಲಾ ಮಟ್ಟದ ಹಾಗೂ ತಾಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read