ಡೆಹರಾಡೂನ್: ಉತ್ತರಾಖಂಡಲ್ಲಿ ಮತ್ತೆ ಮೇಘಸ್ಫೋಟ, ಭೂಕುಸಿತ ಸಂಭವಿಸಿದ್ದು, ಘಟನೆಯಲ್ಲಿ ಐವರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಉತ್ತರಾಖಂಡದ ಹಲವು ಜಿಲ್ಲೆಗಳಲ್ಲಿ ಮೇಘಸ್ಫೋಟ ಸಂಭವಿಸಿದ್ದು, ಇದೇ ವೇಳೆ ಭೀಕರ ಭೂಕುಸಿತವುಂಟಾಗಿದೆ. ದುರಂತದಲ್ಲಿ ಈವರೆಗೆ ಐವರು ಸಾವನ್ನಪ್ಪಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಹಲವರು ನಾಪತ್ತೆಯಾಗಿದ್ದಾರೆ.
ಭೂಕುಸಿತದಿಂದಾಗಿ 40-50 ಕುಟುಂಬಗಳು ಗುಡ್ಡಗಳ ಅವಶೇಷಗಳ ಅಡಿ ಸಿಲುಕಿವೆ. ಪ್ರಕೃತಿ ವಿಕೋಪದಿಂದಾಗಿ ಚಮೋಲಿ, ರುದ್ರಪ್ರಯಾಗ್, ತೆಹ್ರಿ, ಬಾಗೇಶ್ವರ ಜಿಲ್ಲೆಗಳಲ್ಲಿ ಅಪಾರಪ್ರಮಾಣದ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಾಗೇಶ್ವರ ಜಿಲ್ಲೆಯ ಕಾಪ್ಕೋಟ್ ಪ್ರದೇಶದ ಪೌಸರಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 6 ಮನೆಗಳು ಹಾನಿಯಾಗಿವೆ. ಇಬ್ಬರು ಸಾವನ್ನಪ್ಪಿದ್ದು, ಮೂವರು ನಾಪತ್ತೆಯಾಗಿದ್ದಾರೆ. ಚಮೋಲಿ ಜಿಲ್ಲೆಯ ಮೊಪಾಟಾ ಗ್ರಾಮದಲ್ಲಿ ಭೂಕುಸಿತ ಸಂಭವಿಸಿದ್ದು, ಒಂದು ಮನೆ ಹಾಗೂ ಕೊಟ್ಟಿಗೆ ಅವಶೇಷಗಳ ಅಡಿ ಹೂತುಹೋಗಿದೆ. ದಂಪತಿ ಮೃತಪಟ್ಟಿದ್ದು, ಓರ್ವರು ಗಾಯಗೊಂಡಿದ್ದಾರೆ.
ರುದ್ರಪ್ರಯಾಗ್ ದಲ್ಲಿ 30-40 ಕುಟುಂಬಗಳು ಭೂಕುಸಿತದ ಅವಶೇಷಗಳ ಅಡಿ ಹಾಗೂ ಪ್ರವಾಹದಲ್ಲಿ ಸಿಲುಕಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.