ಬೆಂಗಳೂರು: ಅನನ್ಯಾ ಭಟ್ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಆರಂಭಿಸಿರುವ ಎಸ್ ಐಟಿ ಸುಜಾತಾ ಭಟ್ ಅವರಿಗೆ ನೋಟಿಸ್ ನೀಡಿದೆ.
ಅಗತ್ಯ ದಾಖಲೆಗಳೊಂದಿಗೆ ಎಸ್ ಐಟಿ ಕಚೇರಿಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ. ಆದರೆ ಸುಜಾತಾ ಭಟ್ ಯಾವುದೇ ಉತ್ತರ ನೀಡಿಲ್ಲ ಎನ್ನಲಾಗಿದೆ. ಈಗಾಗಲೇ ಎಸ್ ಐಟಿ ಮೊದಲ ನೋಟಿಸ್ ನೀಡಿ ವಿಚಾರಣೆಗೆ ಬರುವಂತೆ ತಿಳಿಸಿತ್ತು. ಆದರೆ ಸುಜಾತಾ ಭಟ್ ಮೊದಲ ನೋಟಿಸ್ ಗೂ ಯಾವುದೇ ಉತ್ತರ ಕೊಟ್ಟಿಲ್ಲ.
ಈ ಹಿನ್ನೆಲೆಯಲ್ಲಿ ಸುಜಾತಾ ಭಟ್ ಅವರಿಗೆ ಎಸ್ ಐಟಿ ಎರಡನೇ ನೋಟಿಸ್ ನೀಡಿದೆ. ಈ ಬಾರಿ ಸುಜಾತಾ ಭಟ್, ನನಗೆ ಅನಾರೋಗ್ಯ. ಜೊತೆಗೆ ಜೀವ ಬೆದರಿಕೆ ಇದೆ. ನಾನು ಬರಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ ಎನ್ನಲಾಗಿದೆ. ಹಾಗಾಗಿ ಎಸ್ ಐಟಿ ಅಧಿಕಾರಿಗಳು ಅವರ ಮನೆಗೆ ಬಂದು ವಿಚಾರಣೆ ನಡೆಸಲು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ.