ಬೆಳಗಾವಿ : ಪ್ರೇಯಸಿಗೆ ಚಾಕುವಿನಿಂದ ಚುಚ್ಚಿ ತಾನೂ ಇರಿದುಕೊಂಡು ಪಾಗಲ್ ಪ್ರೇಮಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಗಾವಿಯ ಖಾನಾಪುರ ತಾಲೂಕಿನ ಬೀಡಿ ಗ್ರಾಮದಲ್ಲಿ ನಡೆದಿದೆ.
ಮೃತರನ್ನು ಗ್ರಾಮದ ರೇಷ್ಮಾ ತಿರವಿರ (29) ಹಾಗೂ ಆನಂದ್ ಸುತಾರ್ ಎಂದು ಗುರುತಿಸಲಾಗಿದೆ. ಒಂದೇ ಗ್ರಾಮದವರಾದ ಇಬ್ಬರು ಸುಮಾರು 2 ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಇಬ್ಬರಿಗೂ ಮದುವೆಯಾಗಿತ್ತು. ಆನಂದ್ ಗೆ ಮೂವರು ಮಕ್ಕಳಿದ್ದರು. ರೇಷ್ಮಾಗೆ ಇಬ್ಬರು ಮಕ್ಕಳಿದ್ದರು. ಇಬ್ಬರ ನಡುವೆ ಅನೈತಿಕ ಸಂಬಂಧವಿರುವ ವಿಷಯ ತಿಳಿದು ರೇಷ್ಮಾ ಪತಿ ಗಲಾಟೆ ಮಾಡಿದ್ದರು. ಮದುವೆಯಾಗಿದ್ದರೂ ಇಬ್ಬರ ನಡುವೆ ಅನೈತಿಕ ಸಂಬಂಧ ಹುಟ್ಟಿತ್ತು, ಈ ವಿಷಯ ತಿಳಿದ ರೇಷ್ಮಾ ಗಂಡ ಗಲಾಟೆ ಮಾಡಿದ್ದರು. ಅಲ್ಲದೇ ನಂದಗಡ ಪೊಲೀಸ್ ಠಾಣೆಗೆ ಕೂಡ ದೂರು ನೀಡಿದ್ದರು. ನಂತರ ಇಬ್ಬರಿಗೂ ಬುದ್ದಿ ಹೇಳಿ ಕಳುಹಿಸಲಾಗಿತ್ತು.
ಈ ವಿಚಾರಕ್ಕೆ ಸಿಟ್ಟಾಗಿದ್ದ ಆನಂದ್ ಭೇಟಿ ಮಾಡುವ ನೆಪದಲ್ಲಿ ರೇಷ್ಮಾಳನ್ನು ಕರೆಸಿ ಚಾಕು ಇರಿದಿದ್ದಾನೆ. ಗಂಭೀರವಾಗಿ ಗಾಯಗೊಂಡ ರೇಷ್ಮಾ ಸ್ಥಳದಲ್ಲೇ ಮೃತಪಟ್ಟರೆ, ಅದೇ ಚಾಕುವಿನಿಂದ ಚುಚ್ಚಿಕೊಂಡಿದ್ದ ಆನಂದ್ ಆಸ್ಪತ್ರೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಈ ಸಂಬಂಧ ನಂದಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.