ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಮನೆ ಮಾಲೀಕರ ಸ್ನೇಹಿತನ ಪುತ್ರಿಯ ಮೇಲೆ ಮನೆ ಕೆಲಸದ ಮಹಿಳೆ ಮಚ್ಚಿನಿಂದ ಹಲ್ಲೆ ನಡೆಸಿದ ಆರೋಪ ಕೇಳಿ ಬಂದಿದ್ದು, ಮಹಿಳೆಯನ್ನು ವೈಯಾಲಿಕಾವಲ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಸಪ್ಪ ಗಾರ್ಡನ್ ನಿವಾಸಿ ಲಲಿತಾ ಬಂಧಿತ ಮಹಿಳೆ. ಹಲ್ಲೆಗೊಳಗಾದ ಸುಶ್ಮಿತಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಲ್ಲೇಶ್ವರದ ಬಸಪ್ಪಲೇನ್ ನಲ್ಲಿ ನಿವೃತ್ತ ಸರ್ಕಾರಿ ನೌಕರ ವೇಣುಗೋಪಾಲಗೌಡ ಮತ್ತು ಸರೋಜಮ್ಮ ಕುಟುಂಬ ವಾಸವಾಗಿದೆ. ಇವರ ಮನೆಯಲ್ಲಿ ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಉಪ್ಪಾರಹಳ್ಳಿಯ ಲಲಿತಾ ಕೆಲಸ ಮಾಡುತ್ತಿದ್ದರು.
ನಗರದ ನರ್ಸಿಂಗ್ ಕಾಲೇಜಿನಲ್ಲಿ ಓದುತ್ತಿದ್ದ ಸುಶ್ಮಿತಾ ಅವರ ತಂದೆ ಪ್ರಭಾಕರ್ ಮತ್ತು ವೇಣುಗೋಪಾಲ್ ಸ್ನೇಹಿತರಾಗಿದ್ದು, ಆಗಾಗ ವೇಣುಗೋಪಾಲ್ ಅವರ ಮನೆಗೆ ಸುಶ್ಮಿತಾ ಬಂದು ಹೋಗುತ್ತಿದ್ದರು. ಭಾನುವಾರ ಮನೆಗೆ ಬಂದಿದ್ದ ಸುಶ್ಮಿತಾ ಮನೆ ಕೆಲಸದ ಲಲಿತಾರೊಂದಿಗೆ ಜಗಳವಾಡಿದ್ದಾರೆ. ಈ ವೇಳೆ ವೇಣುಗೋಪಾಲ್ ಕುಟುಂಬದವರು ಇಬ್ಬರಿಗೂ ಬುದ್ಧಿಮಾತು ಹೇಳಿದ್ದಾರೆ.
ಆದರೆ ತನಗೆ ಸುಶ್ಮಿತಾ ನಿಂದಿಸಿದ್ದಾಳೆ ಎಂದು ಕೋಪಗೊಂಡ ಲಲಿತಾ ಮಧ್ಯರಾತ್ರಿ ರೂಂನಲ್ಲಿ ಮಲಗಿದ್ದ ಸುಶ್ಮಿತಾ ಮೇಲೆ ಮಚ್ಚಿನಿಂದ ಏಕಾಏಕಿ ಹಲ್ಲೆ ನಡೆಸಿ ಕೊಲೆ ಮಾಡಲು ಯತ್ನಿಸಿದ್ದಾಳೆ. ಆಕೆಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಲಲಿತಾ ಅವರನ್ನು ಬಂಧಿಸಲಾಗಿದೆ.