ಭೋಪಾಲ್: ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆದ ವಾಗ್ವಾದವೊಂದು ಕೊಲೆಯಲ್ಲಿ ಅಂತ್ಯಗೊಂಡಿದೆ. ‘ಲವ್ ಜಿಹಾದ್’ ಸಂಬಂಧಿತ ವಾಗ್ವಾದದಲ್ಲಿ ವ್ಯಕ್ತಿಯೊಬ್ಬನನ್ನು ತೀಕ್ಷ್ಣ ಆಯುಧದಿಂದ ಇರಿದು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ. ಆರೋಪಿಯನ್ನು ಬಂಧಿಸಲಾಗಿದೆ.
ಜುಲೈ 10 ರಂದು ಸಂಜಯ್ ಮೋರೆ ಎಂಬಾತ ತನ್ನ ಹಿಂದೂ ಗೆಳತಿಯೊಂದಿಗೆ ಫೈಝಾನ್ ಎಂಬಾತನನ್ನು ಅಂಬೇಡ್ಕರ್ ಮೈದಾನದಲ್ಲಿ ನೋಡಿದಾಗ ಎರಡು ಗುಂಪುಗಳ ನಡುವೆ ಘರ್ಷಣೆ ಆರಂಭವಾಗಿದೆ. ಸ್ಥಳೀಯರಿಗೆ ವಿಷಯ ತಿಳಿದ ಕೂಡಲೇ ಅವರು ಸ್ಥಳಕ್ಕೆ ತಲುಪಿ ಫೈಝಾನ್‌ನನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ತೀವ್ರ ವಾಗ್ವಾದದಿಂದಾಗಿ ಅದು ಮಾರಾಮಾರಿ ಜಗಳವಾಗಿ ಮಾರ್ಪಟ್ಟಿದೆ.
ಜಗಳದ ಸಂದರ್ಭದಲ್ಲಿ, ಫೈಝಾನ್ ಚಾಕುವನ್ನು ತೆಗೆದು ಸಂಜಯ್ ಮೋರೆಗೆ ಇರಿದಿದ್ದಾನೆ. ತೀವ್ರವಾಗಿ ಗಾಯಗೊಂಡ ಸಂಜಯ್‌ರನ್ನು ಅವರ ಸ್ನೇಹಿತರು (ಅವರಿಗೂ ಸಣ್ಣಪುಟ್ಟ ಗಾಯಗಳಾಗಿವೆ) ಕೂಡಲೇ ಭೋಪಾಲ್‌ನ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (AIIMS) ಆಸ್ಪತ್ರೆಗೆ ದಾಖಲಿಸಿದ್ದಾರೆ. ಎರಡು ದಿನಗಳ ತೀವ್ರ ಚಿಕಿತ್ಸೆಯ ನಂತರವೂ, ಸಂಜಯ್ ಮೋರೆ ಚಾಕು ಇರಿತದಿಂದಾಗಿದ್ದ ಗಾಯಗಳಿಂದಾಗಿ ಸಾವನ್ನಪ್ಪಿದ್ದಾರೆ.
ಘಟನೆಯ ಮಾಹಿತಿ ಲಭ್ಯವಾದ ನಂತರ, ಪೊಲೀಸರು ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ಕೊಲೆ ಪ್ರಕರಣವನ್ನು ದಾಖಲಿಸಿಕೊಂಡು ಫೈಝಾನ್‌ನನ್ನು ಬಂಧಿಸಿದ್ದಾರೆ ಎಂದು ಗೋವಿಂದಪುರ ಪೊಲೀಸ್ ಠಾಣೆಯ ಇನ್ಚಾರ್ಜ್ ಅವಧೇಶ್ ತೋಮರ್ ತಿಳಿಸಿದ್ದಾರೆ.