HomeLatest Newsಸಂವಿಧಾನ ಪೀಠಿಕೆಯಿಂದ ಜಾತ್ಯತೀತ ಪದ ತೆಗೆಯಬೇಕೆಂಬ ಹೊಸಬಾಳೆ ಹೇಳಿಕೆ ಬಗ್ಗೆ ಮೋದಿ ಸ್ಪಷ್ಟನೆ ನೀಡಲಿ: ಸಿಎಂ...

ಸಂವಿಧಾನ ಪೀಠಿಕೆಯಿಂದ ಜಾತ್ಯತೀತ ಪದ ತೆಗೆಯಬೇಕೆಂಬ ಹೊಸಬಾಳೆ ಹೇಳಿಕೆ ಬಗ್ಗೆ ಮೋದಿ ಸ್ಪಷ್ಟನೆ ನೀಡಲಿ: ಸಿಎಂ ಆಗ್ರಹ

ಬೆಂಗಳೂರು: ಸಂವಿಧಾನ ಪೀಠಿಕೆಯಿಂದ ಸಮಾಜವಾದಿ ಮತ್ತು ಜಾತ್ಯತೀತ ಪದ ತೆಗೆದು ಹಾಕಬೇಕೆಂಬ ಆರ್.ಎಸ್.ಎಸ್. ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರ ಹೇಳಿಕೆಯ ಕುರಿತಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ತಮ್ಮ ಅಭಿಪ್ರಾಯವನ್ನು ದೇಶದ ಜನತೆಯ ಮುಂದಿಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ

ಸಂವಿಧಾನದ ಪೀಠಿಕೆಯಿಂದ ‘’ಸಮಾಜವಾದಿ’ಮತ್ತು “ಜಾತ್ಯತೀತ” ಪದಗಳನ್ನು ಕಿತ್ತುಹಾಕಬೇಕೆಂದು ದತ್ತಾತ್ರೇಯ ಹೊಸಬಾಳೆ ಹೇಳಿರುವುದು ಗಂಭೀರವಾಗಿ ಚರ್ಚೆ ನಡೆಯಬೇಕಾಗಿರುವ ಸಂಗತಿ. ಆಡಳಿತಾರೂಢ ಬಿಜೆಪಿಯ ‘’ಹೈಕಮಾಂಡ್”ನಿಂದಲೇ ಈ ಅಭಿಪ್ರಾಯ ವ್ಯಕ್ತವಾಗಿರುವುದರಿಂದ ಪ್ರಧಾನಿ ಮೋದಿ ಅವರು ಈ ಬಗ್ಗೆ ತಮ್ಮ ಅಭಿಪ್ರಾಯವನ್ನು ದೇಶದ ಜನತೆಯ ಮುಂದಿಡಬೇಕೆಂದು 140 ಕೋಟಿ ಜನರ ಪರವಾಗಿ ನಾನು ಪ್ರಧಾನಿ ಅವರನ್ನು ಆಗ್ರಹಿಸುತ್ತೇನೆ ಎಂದು ಸಿಎಂ ತಿಳಿಸಿದ್ದಾರೆ.

ಭಾರತ ಸಮಾಜವಾದಿ ಮತ್ತು ಜಾತ್ಯತೀತ ದೇಶ ಎಂದು ಎಲ್ಲರೂ ಅರ್ಥಮಾಡಿಕೊಂಡಿದ್ದ ಕಾರಣ ಸಂವಿಧಾನದ ಮೂಲ ಪೀಠಿಕೆಯಲ್ಲಿ ಈ ಪದಗಳನ್ನು ಪ್ರತ್ಯೇಕವಾಗಿ ಸೇರಿಸುವ ಅಗತ್ಯ ಪ್ರಾರಂಭದ ದಿನಗಳಲ್ಲಿ ಬರಲಿಲ್ಲ. ಆದರೆ ನಂತರದ ದಿನಗಳಲ್ಲಿ ಪ್ರಜಾಪ್ರಭುತ್ವದ ಮೂಲ ಆಶಯಗಳಾದ ಜಾತ್ಯತೀತತೆ ಮತ್ತು ಸಮಾಜವಾದದ ಮೇಲೆಯೇ ಆರ್.ಎಸ್.ಎಸ್. ಮತ್ತು ಜನಸಂಘಗಳು ದಾಳಿ ಮಾಡಲು ಶುರುಮಾಡಿದಾಗ ಪ್ರಧಾನಿ ಇಂದಿರಾ ಗಾಂಧಿಯವರು 42ನೇ ತಿದ್ದುಪಡಿ ಮೂಲಕ ಈ ಪದಗಳನ್ನು ಸೇರಿಸಬೇಕಾಯಿತು ಎನ್ನುವುದನ್ನು ಇಡೀ ದೇಶ ಇಂದು ಒಪ್ಪಿಕೊಂಡಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಂವಿಧಾನವನ್ನು ಆರ್.ಎಸ್.ಎಸ್. ವಿರೋಧಿಸುತ್ತಿರುವುದು ಹೊಸ ಬೆಳವಣಿಗೆಯೇನಲ್ಲ. ಭಾರತೀಯ ಜನತಾಪಕ್ಷ ಮತ್ತು ಅದರ ಮಾತೃಸಂಸ್ಥೆಯಾಗಿರುವ ಆರ್.ಎಸ್.ಎಸ್. ಸಂವಿಧಾನವನ್ನು ಅದರ ರಚನೆಯ ದಿನದಿಂದಲೇ ವಿರೋಧಿಸುತ್ತಾ ಬಂದಿರುವುದಕ್ಕೆ ಇತಿಹಾಸ ಸಾಕ್ಷಿಯಾಗಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನವನ್ನು ದೇಶಕ್ಕೆ ಅರ್ಪಿಸಿದ್ದ ನಾಲ್ಕೇ ದಿನಕ್ಕೆ ಅದನ್ನು ವಿರೋಧಿಸಿ ಆರ್.ಎಸ್.ಎಸ್. ಮುಖವಾಣಿ ಆರ್ಗನೈಸರ್ ಪತ್ರಿಕೆ ಸಂಪಾದಕೀಯವನ್ನು ಬರೆದಿತ್ತು.

ಅಂಬೇಡ್ಕರ್ ಅವರ ಸಂವಿಧಾನದಲ್ಲಿ ಭಾರತೀಯತೆಯಾಗಲಿ, ಪುರಾತನ ಭಾರತದ ಕಟ್ಟುಕಟ್ಟಳೆಗಳಾಗಲಿ ಇಲ್ಲ, ಇದೇ ಈ ಸಂವಿಧಾನದ ಅತ್ಯಂತ ಕೆಟ್ಟ ವಿಚಾರ ಎಂದು ಆರ್ಗನೈಸರ್ ಪತ್ರಿಕೆ ಸಂಪಾದಕೀಯ ಬರೆದಿತ್ತು.

ಭಾರತದ ಸಂವಿಧಾನ ಎನ್ನುವುದು ಬೇರೆ ದೇಶಗಳ ಸಂವಿಧಾನದ ಕಲಮ್ ಗಳನ್ನು ಹೆಕ್ಕಿತಂದು ಒಟ್ಟುಗೂಡಿಸಿದ ಕಂತೆ, ಅದರಲ್ಲಿ ಭಾರತೀಯತೆಯೇ ಇಲ್ಲ ಎಂದು ಎಂ.ಎಸ್. ಗೋಲ್ವಾಲ್ಕರ್ ಹೇಳಿದ್ದರು.

ಮನುಸ್ಮೃತಿಯೇ ನಿಜವಾದ ಹಿಂದೂ ಕಾನೂನು, ಅದೇ ಹಿಂದೂಗಳ ಪೂಜನೀಯ ಗ್ರಂಥ. ಈ ಮನುಸ್ಮೃತಿಯ ಆಶಯಗಳು ಸಂವಿಧಾನದಲ್ಲಿ ಇಲ್ಲ ಎಂದು  ವಿ.ಡಿ.ಸಾವರ್ಕರ್ ಹೇಳಿದ್ದರು.

ನಮ್ಮ ಸಂವಿಧಾನದ ಬಗ್ಗೆ ಆರ್.ಎಸ್.ಎಸ್. ಮತ್ತು ಅದರ ನಾಯಕರು ಬಹಿರಂಗವಾಗಿ ವ್ಯಕ್ತಪಡಿಸಿರುವ ಈ ಅಭಿಪ್ರಾಯವನ್ನು ಭಾರತೀಯ ಜನತಾ ಪಕ್ಷ ಇಲ್ಲಿಯವರೆಗೆ ತಿರಸ್ಕರಿಸಿಲ್ಲ. ಇದರ ಬದಲಿಗೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಾಗೆಲ್ಲ ಒಂದೆಡೆ ಆರ್.ಎಸ್.ಎಸ್. ನಾಯಕರು ಮತ್ತು ಇನ್ನೊಂದೆಡೆ ಬಿಜೆಪಿಯ ಕೆಳಹಂತದ ನಾಯಕರು ಸಂವಿಧಾನ ಬದಲಾವಣೆಯ ಕೂಗು ಹಾಕುತ್ತಾ ’ಟೆಸ್ಟ್ ಡೋಸ್ಕೊಡುತ್ತಾ ಜನರ ನಾಡಿ ಮಿಡಿತವನ್ನು ಪರೀಕ್ಷಿಸುವ ಪ್ರಯತ್ನ ಮಾಡುತ್ತಿರುತ್ತಾರೆ. ಬಿಜೆಪಿ ಈ ಕಳ್ಳಾಟವನ್ನು ದೇಶದ ಪ್ರಜ್ಞಾವಂತ ಜನ ಅರ್ಥಮಾಡಿಕೊಂಡಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ತಮ್ಮ ಪಕ್ಷ 400 ಸ್ಥಾನಗಳನ್ನು ಗೆದ್ದರೆ ಸಂವಿಧಾನವನ್ನು ಬದಲಾಯಿಸುವುದಾಗಿ ಬಿಜೆಪಿ ಪಕ್ಷದ ಕೆಲವು ಕೂಗುಮಾರಿಗಳಿಂದ ಘೋಷಣೆ ಮಾಡಿಸಿದ್ದ ಬಿಜೆಪಿ ಅದಕ್ಕೆ ತಕ್ಕ ಉತ್ತರ ಪಡೆದಿದ್ದಾರೆ ಎಂದು ಭಾವಿಸುವೆ. ನಮ್ಮ ನಡುವಿನ ಒಂದಷ್ಟು ಜಾತ್ಯತೀತ ನಿಲುವಿನ ಪಕ್ಷಗಳು ಅಧಿಕಾರದ ಲಾಲಸೆಯಿಂದ ರಾಜಿ ಮಾಡಿಕೊಳ್ಳದೆ ಇದ್ದರೆ ಬಿಜೆಪಿ ಇಂದು ವಿರೋಧಪಕ್ಷದ ಸ್ಥಾನದಲ್ಲಿ ಕೂರಬೇಕಾಗಿತ್ತು. ಇದರ ನಂತರವೂ ಬಿಜೆಪಿ ತನ್ನ ಕುಟಿಲ ಪ್ರಯತ್ನವನ್ನು ಮುಂದುವರಿಸಿರುವುದು ವಿಷಾದನೀಯ.

ಈಗಲೂ ಎಚ್ಚೆತ್ತುಕೊಳ್ಳದೆ ತಮ್ಮ ಕುಟಿಲ ಪ್ರಯತ್ನವನ್ನು ಹೀಗೆಯೇ ಮುಂದುವರಿಸಿದರೆ ದೇಶದ ಪ್ರಜಾಪ್ರಭುತ್ವಪ್ರೇಮಿ ಜನ ಬಿಜೆಪಿಗೆ ತಕ್ಕ ಪಾಠ ಕಲಿಸುವುದು ನಿಶ್ಚಿತ ಎಂದು ಸಿಎಂ ಸಿದ್ಧರಾಮಯ್ಯ ಹೇಳಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular