ಬೆಂಗಳೂರು : ಬೆಂಗಳೂರಲ್ಲಿ ಬೆಚ್ಚಿ ಬೀಳಿಸೋ ಘಟನೆ ನಡೆದಿದ್ದು, ಗಾಂಜಾ ನಶೆಯಲ್ಲಿ ನಡು ರಸ್ತೆಯಲ್ಲೇ ಯುವತಿ ಮೇಲೆ ಕಾಮಕರು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ.
ಬೆಂಗಳೂರು ತಾಲೂಕಿನ ಬನ್ನೇರುಘಟ್ಟ ಠಾಣಾ ವ್ಯಾಪ್ತಿಯ ಮೈಲಸಂದ್ರ ಬಳಿ ರೇಣುಕಾ ಯಲ್ಲಮ್ಮ ಬಡಾವಣೆಯಲ್ಲಿ ಘಟನೆ ನಡೆದಿದೆ. ಬಂಧಿತರನ್ನು ರಿಚರ್ಡ್ (24) ಅಂಥೋನಿ (52) ಎಂದು ಗುರುತಿಸಲಾಗಿದೆ.
ಯುವತಿ ಮನೆಗೆ ದಿನಸಿ ತರಲು ಅಂಗಡಿಗೆ ಹೊರಟಿದ್ದರು. ಈ ವೇಳೆ ಗಾಂಜಾ ಮತ್ತಿನಲ್ಲಿದ್ದ
ಪುಂಡರು ಆಕೆಯನ್ನು ಅಡ್ಡಗಟ್ಟಿ ಮೈ ಕೈ ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದಾರೆ, ಇದಕ್ಕೆ ಯುವತಿ ಪ್ರತಿರೋಧ ವ್ಯಕ್ತಪಡಿಸಿದಾಗ ಆಕೆಯ ಮೇಲೆ ಹಲ್ಲೆ ಯತ್ನ ನಡೆಸಿದ್ದಾರೆ. ಈ ಸಂಬಂಧ ಯುವತಿ ಪೊಲೀಸರಿಗೆ ದೂರು ನೀಡಿದ್ದಾಳೆ. ಆರೋಪಿಗಳು ಯುವತಿ ನೆರವಿಗೆ ಬಂದ ಸ್ಥಳೀಯರ ಮೇಲೂ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಹಲ್ಲೆ ಮತ್ತು ದೌರ್ಜನ್ಯದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆರೋಪಿಗಳು ಯುವತಿ ವಿರುದ್ಧವೂ ಕೂಡ ಪ್ರತಿದೂರು ಸಲ್ಲಿಸಿದ್ದು, ಜಿಮ್ ಟ್ರೈನರ್ ಕರೆಸಿ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ. ಸದ್ಯ ಇಬ್ಬರನ್ನ ಬಂಧಿಸಿರುವ ಪೊಲೀಸರು ಉಳಿದ ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

