HomeLatest Newsಉದ್ಯೋಗಿಗೆ ಕಣ್ಣೀರಾಕಿಸಿದ ವರ್ಕ್‌ ಕಲ್ಚರ್‌: ಬೆಂಗಳೂರಿನಲ್ಲಿ ಆಘಾತಕಾರಿ ಘಟನೆ !

ಉದ್ಯೋಗಿಗೆ ಕಣ್ಣೀರಾಕಿಸಿದ ವರ್ಕ್‌ ಕಲ್ಚರ್‌: ಬೆಂಗಳೂರಿನಲ್ಲಿ ಆಘಾತಕಾರಿ ಘಟನೆ !

ಬೆಂಗಳೂರು: ನಗರದ ಸಾಫ್ಟ್‌ವೇರ್ ಕಂಪನಿಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಯುವ ಇಂಜಿನಿಯರ್ ಒಬ್ಬರು, ತಮ್ಮ ಕಚೇರಿಯ ವಾತಾವರಣದಿಂದ ಬೇಸತ್ತು ಕಣ್ಣೀರಾಕಿ ಕೊನೆಗೆ ಕೆಲಸಕ್ಕೆ ರಾಜೀನಾಮೆ ನೀಡಿದ ಘಟನೆ ಬೆಳಕಿಗೆ ಬಂದಿದೆ. ಈ ಘಟನೆಯು ಕಾರ್ಯಕ್ಷೇತ್ರಗಳಲ್ಲಿನ ಮಾನಸಿಕ ಒತ್ತಡ ಮತ್ತು ಅನಾರೋಗ್ಯಕರ ವಾತಾವರಣದ ಕುರಿತು ತೀವ್ರ ಚರ್ಚೆಗೆ ನಾಂದಿ ಹಾಡಿದೆ.

ವರದಿಗಳ ಪ್ರಕಾರ, ಈ ಸಾಫ್ಟ್‌ವೇರ್ ಇಂಜಿನಿಯರ್ ಇತ್ತೀಚೆಗೆ ತಮ್ಮ ಮ್ಯಾನೇಜರ್ ಜೊತೆ ನಡೆದ ಗೂಗಲ್ ಮೀಟ್ ವಿಡಿಯೋ ಕರೆಯಲ್ಲಿ ಪ್ರಾಜೆಕ್ಟ್‌ಗೆ ಸಂಬಂಧಿಸಿದಂತೆ ಸ್ಪಷ್ಟತೆ ಕೇಳಿದ್ದಾರೆ. ಆದರೆ, ಅವರಿಗೆ ಸರಿಯಾದ ಮಾರ್ಗದರ್ಶನ ಸಿಗುವ ಬದಲು “ನೀವೇ ಕಂಡುಕೊಳ್ಳಿ” ಎಂಬಂಥ ಅಸಹಕಾರದ ಪ್ರತಿಕ್ರಿಯೆ ಲಭ್ಯವಾಗಿದೆ ಎನ್ನಲಾಗಿದೆ. ಅಲ್ಲದೆ, ಸಾರ್ವಜನಿಕವಾಗಿ ಅವಮಾನಕ್ಕೆ ಒಳಗಾದ ಕಾರಣ ಇಂಜಿನಿಯರ್ ಸಭೆಯಲ್ಲೇ ಕಣ್ಣೀರಾಗಿದ್ದಾರೆ.

ಈ ಘಟನೆಯನ್ನು ಉತ್ಪನ್ನ ನಿರ್ವಹಣಾ ಸಲಹೆಗಾರ ಶ್ರವಣ್ ಟಿಕೂ ಅವರು ಲಿಂಕ್ಡ್‌ಇನ್‌ನಲ್ಲಿ ಹಂಚಿಕೊಂಡಿದ್ದು, ಇದು ಕೇವಲ ‘ಟಾಕ್ಸಿಕ್’ (ವಿಷಮಯ) ವಾತಾವರಣವಲ್ಲ, ಬದಲಿಗೆ ‘ಟ್ರಾಮಾ’ (ಆಘಾತಕಾರಿ) ಎಂದು ಬಣ್ಣಿಸಿದ್ದಾರೆ. “ನಾವು ಪ್ರಶಂಸೆಗಾಗಿ ಆಶಿಸುವುದನ್ನು ನಿಲ್ಲಿಸಿದ್ದೇವೆ. ಈಗ ನಾವು ಇತರರ ಮುಂದೆ ಅವಮಾನಕ್ಕೊಳಗಾಗುವುದಿಲ್ಲ ಎಂದು ಆಶಿಸುತ್ತೇವೆ,” ಎಂದು ಇಂಜಿನಿಯರ್ ಹೇಳಿರುವುದನ್ನು ಶ್ರವಣ್ ತಮ್ಮ ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮ್ಯಾನೇಜರ್ ಪದೇ ಪದೇ ಕರೆ ಮಾಡುವುದು, ನೌಕರರ ಕಾಳಜಿಯನ್ನು ಕಡೆಗಣಿಸುವುದು ಮತ್ತು ತಪ್ಪನ್ನು ಇತರರ ಮೇಲೆ ಹೊರಿಸುವುದು ಸಾಮಾನ್ಯವಾಗಿತ್ತು ಎಂದು ಇಂಜಿನಿಯರ್ ವಿವರಿಸಿದ್ದಾರೆ. ಅಂತಿಮವಾಗಿ ಮಾನಸಿಕ ನೆಮ್ಮದಿಗಾಗಿ ಕೆಲಸಕ್ಕೆ ರಾಜೀನಾಮೆ ನೀಡಿದಾಗಲೂ, ಮ್ಯಾನೇಜರ್ “ನೀವು ಇನ್ನೊಂದು ಕೆಲಸ ಹುಡುಕುವುದು ಕಷ್ಟ. ಅಲ್ಲಿ ಎಷ್ಟು ದಿನ ಬಾಳುತ್ತೀರೋ ನೋಡೋಣ,” ಎಂದು ವ್ಯಂಗ್ಯವಾಡಿದ್ದಾರೆ ಎಂದು ತಿಳಿದುಬಂದಿದೆ.

ಈ ಘಟನೆ ವೈರಲ್ ಆಗಿದ್ದು, “ಇದು ಹೃದಯ ಕಲಕುವ ವಿಚಾರ. ನಾಯಕತ್ವದ ಕೊರತೆಯು ಒಬ್ಬರ ಆತ್ಮವಿಶ್ವಾಸ ಮತ್ತು ಮಾನಸಿಕ ಆರೋಗ್ಯದ ಮೇಲೆ ಎಷ್ಟು ಆಳವಾದ ಪರಿಣಾಮ ಬೀರಬಹುದು ಎಂಬುದನ್ನು ಇದು ತೋರಿಸುತ್ತದೆ,” ಎಂದು ಅನೇಕ ನೆಟ್ಟಿಗರು ಕಳವಳ ವ್ಯಕ್ತಪಡಿಸಿದ್ದಾರೆ. ಕೆಟ್ಟ ನಿರ್ವಹಣೆ ಎಷ್ಟು ದೊಡ್ಡ ಮಟ್ಟದಲ್ಲಿ ನೌಕರರ ಮಾನಸಿಕ ಸ್ಥೈರ್ಯವನ್ನು ಕುಗ್ಗಿಸುತ್ತದೆ ಎಂಬುದಕ್ಕೆ ಇದು ಸ್ಪಷ್ಟ ಉದಾಹರಣೆಯಾಗಿದೆ.


For Latest News Updates, Join Our Whatsapp Community🚩
RELATED ARTICLES

Most Popular