ಬೆಂಗಳೂರು : ನಿಮ್ಮ ಜೀವನಕ್ಕೆ ಅಂತ್ಯವಿಲ್ಲ..ಅಂಬಿ… ಅಮರ ಎಂದು ಪತಿ ಅಂಬರೀಷ್ ಹುಟ್ಟುಹಬ್ಬಕ್ಕೆ ಪತ್ನಿ ಸುಮಲತಾ ಭಾವನಾತ್ಮಕ ಪೋಸ್ಟ್ ಮಾಡಿದ್ದಾರೆ.
ಪೋಸ್ಟ್ ಹಂಚಿಕೊಂಡ ಸುಮಲತಾ ”ಇಂದು, ನಿಮ್ಮ 73ನೇ ಜನ್ಮದಿನ… ನಿಮ್ಮೊಂದಿಗೆ ಕಳೆದ ಪ್ರತಿ ಕ್ಷಣ, ಪ್ರತಿದಿನ ನನ್ನ ಸ್ಮೃತಿ ಪಟಲದಲ್ಲಿ ಅಚ್ಚಳಿಯದೇ ಉಳಿದಿದೆ… ಒಟ್ಟಿಗೆ ಕಳೆದ ಆ ದಿನಗಳ ನೆನಪುಗಳ ಜೊತೆ ಇಂದು ನಿಮ್ಮ ಅನುಪಸ್ಥಿತಿ ಅತೀವ ದುಃಖವನ್ನು ಉಂಟು ಮಾಡುತ್ತಿದೆ… ಆದರೆ, ನೀವು ತೋರಿದ ಪ್ರೀತಿ ಎಂದೆಂದಿಗೂ ನನ್ನ ಮನದಲ್ಲಿ ಜೀವಂತವಾಗಿದೆ. ಅನು ಕ್ಷಣವೂ ನೀವು ನಮ್ಮೊಂದಿಗೆ ಇದ್ದೀರಿ ಎನ್ನುವ ನಂಬಿಕೆಯೊಂದಿಗೆ ಬದುಕುತ್ತಿದ್ದೇವೆ. ಈ ನಂಬಿಕೆಯೇ ನನಗೆ ಸ್ಫೂರ್ತಿ ಹಾಗೂ ಸಾಂತ್ವನ ನೀಡುತ್ತದೆ. ದಿನಗಳು ಕಳೆದಿದ್ದರೂ, ನಿಮ್ಮಲ್ಲಿದ್ದ ಪ್ರೀತಿ, ದಯೆ, ಸಹಾನುಭೂತಿ, ಔದಾರ್ಯತೆಯ ಗುಣ ನನಗೆ ಸದಾ ಸ್ಫೂರ್ತಿ ನೀಡುತ್ತಲೇ ಇದೆ. ನೀವು ನನ್ನ ಜೀವನಕ್ಕೆ ತಂದ ಪ್ರತಿ ನಗು, ಪ್ರತಿ ಸಂತೋಷದ ಕ್ಷಣಕ್ಕಾಗಿ ನಾನು ಕೃತಜ್ಞನಾಗಿದ್ದೇನೆ.
ಈ ನಿಮ್ಮ ಜೀವನಕ್ಕೆ ಅಂತ್ಯವಿಲ್ಲ, ನಿಮ್ಮ ನೆನಪುಗಳ ನಗುವಿನಲ್ಲಿ, ಅಳುವಿನಲ್ಲಿ, ನಿಮ್ಮನ್ನು ಪ್ರೀತಿಸುವ-ಆರಾಧಿಸುವ ಹೃದಯಗಳಲ್ಲಿ, ಕೋಟ್ಯಂತರ ಕನ್ನಡಿಗರ ಮನದಲ್ಲಿ ಮತ್ತು ಜೀವನಗಳಲ್ಲಿ ಸದಾ ಜೀವಂತವಾಗಿರುತ್ತದೆ… ಅಂಬಿ… ಅಮರ.” ಎಂದು ಸುಮಲತಾ ಭಾವನಾತ್ಮಕ ಪೋಸ್ಟ್ ಮಾಡಿದ್ದಾರೆ.

