ಹಾಸನ: ಹಾಸನ ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಶಿರಾಢಿಘಾಟ್ ನಲ್ಲಿ ಭೂಕುಸಿತ ಸಂಭವಿಸಿದ್ದು, ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿದೆ.
ಬೆಂಗಳೂರು-ಮಂಗಳೂರು ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಸಕಲೇಶಪುರದ ದೊಡ್ಡತಪ್ಪಲು ಬಳಿ ರಸ್ತೆಯಲಿ ಮಣ್ಣು ಕುಸಿದಿದ್ದು, ಕಿಲೋಮೀಟರ್ ಗಟ್ಟಲೇ ಟ್ರಾಫಿಕ್ ಜಾಮ್ ಉಂಟಾಗಿದೆ.
ಒಂದೆಡೆ ಮಳೆಯ ಅಬ್ಬರ, ಮತ್ತೊಂದೆಡೆ ಭೂಕುಸಿತದ ನಡುವೆ ಸಾವಿರಾರು ವಾಹನಗಳು ಸಾಲುಗಟ್ಟಿ ನಿಂತಿವೆ. ಇದೇ ಭಾಗದಲ್ಲಿ ಕೆಲ ವಾಹನಗಳು ರಸ್ತೆಯಲ್ಲಿಯೇ ಕೆಟ್ಟು ನಿಂತ ಪರಿಣಾಮ ವಾಹನ ಸವಾರರು ಇನ್ನಷ್ಟು ಸಮಸ್ಯೆ ಎದುರಿಸುವಂತಾಗಿದೆ.
ಸ್ಥಳಕ್ಕೆ ಉಪವಿಭಾಗಾಧಿಕಾರಿ ಶೃತಿ, ತಹಶೀಲ್ದಾರ್ ಅರವಿಂದ್, ಪೊಲೀಸ್ ಅಧಿಕಾರಿಗಳು ಭೇತಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಟ್ರಾಫಿಕ್ ಜಾಮ್ ನಿಂದ ವಾಹನ ಸವಾರರು ಪರದಾಟ ನಡೆಸುತ್ತಿರುವ ಹಿನ್ನೆಲೆಯಲ್ಲಿ ಬದಲಿ ಮಾರ್ಗದಲ್ಲಿ ಸಂಚರಿಸುವಂತೆ ಸೂಚಿಸಿದ್ದಾರೆ.
ಹಾರ್ಲೆ ಮಾರ್ಗವಾಗಿ ಹಾನುಬಾಳು ರಸ್ತೆ ಮೂಲಕ ಸಕಲೇಶಪುರದಿಂದ ಹಾಸನ ಮಾರ್ಗವಾಗಿ ಬೆಂಗಳೂರಿಗೆ ತೆರಳುವಂತೆ ಸೂಚಿಸಲಾಗಿದೆ.