
2024-25ನೇ ಸಾಲಿನ ಯಶಸ್ವಿನಿ ಸಹಕಾರಿಗಳ ಆರೋಗ್ಯ ರಕ್ಷಣಾ ಯೋಜನೆಯಡಿ ನೋಂದಾಯಿಸಲು ಅವಧಿ ವಿಸ್ತರಿಸಲಾಗಿದೆ.
ಯಶಸ್ವಿನಿ ಸಹಕಾರಿಗಳ ಆರೋಗ್ಯ ರಕ್ಷಣಾ ಯೋಜನೆಯು ಶಸ್ತ್ರಚಿಕಿತ್ಸಾ ಯೋಜನೆಯಾಗಿದ್ದು, ಈ ಯೋಜನೆಯಡಿ 2024-2025ನೇ ಸಾಲಿಗೆ ನೋಂದಾಯಿಸಲು ಸರ್ಕಾರವು ಆದೇಶ ಹೊರಡಿಸಿದೆ. ಕರ್ನಾಟಕ ಸೌಹಾರ್ದ ಸಹಕಾರಿ, ಕರ್ನಾಟಕ ಸಹಕಾರ ಸಂಘದ ಸದಸ್ಯರು ಮತ್ತು ಅವರ ಕುಟುಂಬ ವರ್ಗದವರಿಗೆ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ವತಿಯಿಂದ ಸಂಘಟಿಸಲ್ಪಟ್ಟಿರುವ ಎಲ್ಲಾ ಗ್ರಾಮೀಣ ಸ್ವ-ಸಹಾಯ ಗುಂಪುಗಳ ಸದಸ್ಯರು, ಸಹಕಾರಿ ಮೀನುಗಾರರು, ಮತ್ತು ಸಹಕಾರಿ ನೇಕಾರರುಕೂಡ ಈ ಯೋಜನೆಯ ಸೌಲಭ್ಯ ಪಡೆಯಲು ಅರ್ಹರಿರುತ್ತಾರೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಸದಸ್ಯರಿಗೆ ಅವರ ವಾರ್ಷಿಕ ಸದಸ್ಯತ್ವದ ವಂತಿಗೆಯನ್ನು ಸರ್ಕಾರವೇ ಭರಿಸುತ್ತದೆ.
ಯಶಸ್ವಿನಿ ಪ್ರೋಟೋಕಾಲ್‌ನಂತೆ ನಿಗದಿ ಪಡಿಸಿರುವ ಚಿಕಿತ್ಸೆಗಳ ಪ್ಯಾಕೇಜಿನ ದರದ ಮಿತಿಗೊಳ್ಳಪಟ್ಟು ಫಲಾನುಭವಿ ಮತ್ತು ಅವರ ಕುಟುಂಬಕ್ಕೆ ವಾರ್ಷಿಕ ಗರಿಷ್ಠ 5 ಲಕ್ಷ ರೂ. ವೈದ್ಯಕೀಯ ಚಿಕಿತ್ಸಾ ವೆಚ್ಚದ ಮಿತಿಯೊಂದಿಗೆ ನೆಟ್‌ವರ್ಕ್ ಆಸ್ಪತ್ರಗಳಲ್ಲಿ ಚಿಕಿತ್ಸೆ ಪಡೆಯಲು ಅವಕಾಶ ಇರುತ್ತದೆ. ಸಹಕಾರ ಸಂಘಗಳಲ್ಲಿ ಕುಟುಂಬದ ಒಬ್ಬ ವ್ಯಕ್ತಿ ಸದಸ್ಯನಾಗಿ 1 ತಿಂಗಳು ಗತಿಸಿದ್ದಲ್ಲಿ ಈ ಯೋಜನೆಯಡಿಯಲ್ಲಿ ನೋಂದಾಯಿಸಬಹುದಾಗಿದೆ ಹಾಗೂ ವಯೋಮಿತಿಯ ನಿರ್ಬಂಧವಿರುವುದಿಲ್ಲ.
ಯೋಜನೆಯ ಸೌಲಭ್ಯ ಪಡೆಯಲು ಯಶಸಿನಿ ಸದಸ್ಯರನ್ನಾಗಿ ನೋಂದಾಯಿಸಿಕೊಳ್ಳಬೇಕು. ಅಲ್ಲದೇ ಸರ್ಕಾರವು ಆದೇಶದಂತೆ ಯಶಸ್ವಿನಿ ಯೋಜನೆಯಡಿ ಹೆಚ್ಚಿನ ರೀತಿಯಲ್ಲಿ ಫಲಾನುಭವಿಗಳಾಗಲು ಸದಸ್ಯರ ನೋಂದಣಿ ಅವಧಿಯನ್ನು ಮಾರ್ಚ್ 31 ರವರೆಗೆ ವಿಸ್ತರಿಸಲಾಗಿರುತ್ತದೆ ಎಂದು ಕೊಪ್ಪಳ ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕ ಸಜ್ಜನರ ಪ್ರಕಾಶ ಅವರು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸ್ಥಳೀಯ ಎಲ್ಲಾ ವಿವಿಧ ಸಹಕಾರ ಸಂಘಗಳು, ಸೌಹಾರ್ದ ಸಹಕಾರಿ ಸಂಘಗಳ ಹಾಗೂ ಸಹಕಾರ ಇಲಾಖಾ ಕಛೇರಿಗಳನ್ನು ಖುದ್ದಾಗಿ ಹಾಗೂ ಗಂಗಾವತಿ ಹಾಗೂ ಕುಷ್ಟಗಿ ಸಹಕಾರ ಅಭಿವೃದ್ಧಿ ಅಧಿಕಾರಿ ಮೊ.ಸಂ: 8095099563, ಯಲಬುರ್ಗಾ ಸಹಕಾರ ಅಭಿವೃದ್ಧಿ ಅಧಿಕಾರಿ ಮೊ.ಸಂ: 8660289535, ಕೊಪ್ಪಳ ಸಹಕಾರ ಸಂಘಗಳ ನಿರೀಕ್ಷಕರ ಮೊ.ಸಂ: 7353457313, ಸೌಹಾರ್ದ ಸಂಯೋಜಕರ ಮೊ.ಸಂ: 8884460274 ಮೂಲಕ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.