ಅನಂತು ಕೃಷ್ಣನ್ (26) ಎಂಬಾತನನ್ನು ಕೇರಳದ ಕೊಚ್ಚಿ ಪೊಲೀಸರು ಬಂಧಿಸಿದ್ದು, ಕೇರಳದಾದ್ಯಂತ ಜನರನ್ನು ವಂಚಿಸಿ ಸುಮಾರು 20 ಕೋಟಿ ರೂ.ಗಳನ್ನು ದೋಚಿರುವ ಆರೋಪ ಈತನ ಮೇಲಿದೆ. ಪ್ರಮುಖ ಕಂಪನಿಗಳ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (CSR) ನಿಧಿಗಳ ಮೂಲಕ ಅರ್ಧ ಬೆಲೆಗೆ ಸ್ಕೂಟರ್, ಗೃಹೋಪಯೋಗಿ ವಸ್ತುಗಳು ಮತ್ತು ಎಲೆಕ್ಟ್ರಾನಿಕ್ ವಸ್ತುಗಳನ್ನು ನೀಡುವುದಾಗಿ ನಂಬಿಸಿ ಈತ ಜನರನ್ನು ವಂಚಿಸಿದ್ದಾನೆ.
2022 ರಿಂದ, ಕೃಷ್ಣನ್ ಈ ಯೋಜನೆಯನ್ನು ನಡೆಸುತ್ತಿದ್ದು, ಪ್ರಮುಖ ಕಂಪನಿಗಳ CSR ನಿಧಿಗಳ ಮೂಲಕ ರಿಯಾಯಿತಿ ದರದಲ್ಲಿ ಸರಕುಗಳನ್ನು ಪಡೆಯಬಹುದು ಎಂದು ಜನರನ್ನು ನಂಬಿಸಿದ್ದ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಪಿಟಿಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. ಇಡುಕ್ಕಿ ಸೇರಿದಂತೆ ಕೃಷ್ಣನ್ ವಿರುದ್ಧ ಹಲವೆಡೆ ಈಗಾಗಲೇ ಹಲವಾರು ವಂಚನೆ ಮತ್ತು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಕಣ್ಣೂರಿನಲ್ಲಿ ದಾಖಲಾದ ಇತ್ತೀಚಿನ ಪ್ರಕರಣದಲ್ಲಿ ಕೃಷ್ಣನ್ ಮತ್ತು ಇತರೆ ಆರು ಮಂದಿಯನ್ನು ಹೆಸರಿಸಲಾಗಿದೆ. ಅವರಲ್ಲಿ ಕಾಂಗ್ರೆಸ್ ನಾಯಕಿ ಲಾಲಿ ವಿನ್ಸೆಂಟ್ ಕೂಡ ಇದ್ದಾರೆ.
ವಿನ್ಸೆಂಟ್, ಕೃಷ್ಣನ್ ಅವರನ್ನು ಸಮರ್ಥಿಸಿಕೊಂಡು, ಅವರು ಇಂತಹ ವಂಚನೆ ಮಾಡಲು ಸಾಧ್ಯವಿಲ್ಲ. ಇದನ್ನು ತಾನು ನಂಬುವುದಿಲ್ಲ ಎಂದು ಕೊಚ್ಚಿಯಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರಲ್ಲದೇ “ಅವನು ನನಗೆ ಮಗನಿದ್ದಂತೆ” ಎಂದಿದ್ದಾರೆ.
ಕೃಷ್ಣನ್ ವಾಸ್ತವವಾಗಿ ಅನೇಕ ಕುಟುಂಬಗಳಿಗೆ ದ್ವಿಚಕ್ರ ವಾಹನ, ಹೊಲಿಗೆ ಯಂತ್ರಗಳು ಮತ್ತು ಇತರ ಉಪಕರಣಗಳನ್ನು ಒದಗಿಸಿದ್ದಾನೆಂದು ವಿನ್ಸೆಂಟ್ ತಿಳಿಸಿದ್ದಾರೆ. ಆದಾಗ್ಯೂ, ವರದಿಯ ಪ್ರಕಾರ, ಭರವಸೆ ನೀಡಿದ ಸ್ಕೂಟರ್‌ಗಳಲ್ಲಿ ಯಾವುದನ್ನೂ ತಲುಪಿಸಲಾಗಿಲ್ಲ.
ವಂಚನೆ ಹೇಗೆ ನಡೆಯಿತು ?
ಕೃಷ್ಣನ್‌ನ ತಂತ್ರವನ್ನು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ವಿವರಿಸಿದ್ದು, ಮೂವಟ್ಟುಪುಳಚಾ ಸಮಾಜೋ-ಆರ್ಥಿಕ ಅಭಿವೃದ್ಧಿ ಸೊಸೈಟಿ ಎಂಬ ಸಂಸ್ಥೆಯನ್ನು ಈತ ಸ್ಥಾಪಿಸಿದ್ದ. ಅರ್ಧ ಬೆಲೆಗೆ ದ್ವಿಚಕ್ರ ವಾಹನಗಳನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ನಂಬಿಸಿ ತನ್ನ ಕನ್ಸಲ್ಟೆನ್ಸಿಯಲ್ಲಿ ಹಣವನ್ನು ಠೇವಣಿ ಮಾಡಲು ಸದಸ್ಯರನ್ನು ಒಪ್ಪಿಸಿದ್ದ. ಕೃಷ್ಣನ್ ತನ್ನ ಹೆಸರಿನಲ್ಲಿ ಹಲವಾರು ಕನ್ಸಲ್ಟೆನ್ಸಿಗಳನ್ನು ಸ್ಥಾಪಿಸಿ ಅವುಗಳ ಮೂಲಕ ಹಣಕಾಸಿನ ವಹಿವಾಟು ನಡೆಸಿದ್ದ ಎಂದು ವರದಿಯಾಗಿದೆ.
ರಾಷ್ಟ್ರೀಯ ಎನ್‌ಜಿಒ ಫೆಡರೇಶನ್‌ನ ರಾಷ್ಟ್ರೀಯ ಸಂಯೋಜಕರಾಗಿದ್ದೇನೆಂದು ಮತ್ತು ವಿವಿಧ ಭಾರತೀಯ ಕಂಪನಿಗಳಿಂದ CSR ನಿಧಿಗಳನ್ನು ನಿರ್ವಹಿಸುವ ಜವಾಬ್ದಾರಿ ನನ್ನ ಮೇಲಿದೆ ಎಂದು ಜನರನ್ನು ತಪ್ಪುದಾರಿಗೆಳೆದ ಎಂದು ಆ ಪೊಲೀಸ್ ಅಧಿಕಾರಿ ವಿವರಿಸಿದ್ದಾರೆ.