ಬೆಂಗಳೂರು: ಕೇಂದ್ರ ಬಜೆಟ್ ನಲ್ಲಿ ಕರ್ನಾಟಕಕ್ಕೆ ಯಾವುದೇ ಯೋಜನೆ ಘೋಷಣೆ ಮಾಡಿಲ್ಲ. ಬೆಂಗಳೂರಿಗೆ ಯಾವುದೇ ಅನುದಾನ ನೀಡಿಲ್ಲ. ಇದೊಂದು ನಿರಾಶಾದಾಯಕ ಬಜೆಟ್ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಕಿಡಿಕಾರಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಕೃಷ್ಣಬೈರೇಗೌಡ, ರಾಜ್ಯಕ್ಕೆ ಕೇಂದ್ರ ಬಜೆಟ್ ನಲ್ಲಿ ಚೊಂಬು ಕೊಡಲಾಗಿದೆ. ಯಾವುದೇ ಯೋಜನೆ, ಅನುದಾನ ಘೋಷಣೆ ಮಾಡಿಲ್ಲ ಬಿಹಾರಕ್ಕೆ ನಾಲ್ಕು ಯೋಜನೆ ಘೋಷಣೆ ಮಾಡಿದ್ದಾರೆ. ಕರ್ನಾಟಕಕ್ಕೆ ಏನೂ ಇಲ್ಲ. ತಾರತಮ್ಯ ಧೋರಣೆ ಅನುಸರಿಸಲಾಗಿದೆ ಎಂದು ಕಿಡಿಕಾರಿದರು.
ಬೆಂಗಳೂರಿಗೆ ಕೇಂದ್ರ ಬಜೆಟ್ ನಲ್ಲಿ ಏನು ಘೋಷಣೆ ಮಾಡಿದ್ದಾರೆ? ಕಲ್ಯಾಣ ಕರ್ನಾಟಕ, ಮಲೆನಾಡು ಭಾಗಕ್ಕಂತೂ ಏನೂ ಇಲ್ಲ. ಭದ್ರಾ ಮೇಲ್ದಂಡೆ ಯೋಜನೆಗೆ ನಯಾ ಪೈಸೆ ಹಣ ನೀಡಿಲ್ಲ. ರಾಜ್ಯಕ್ಕೆ ತುಂಬಾ ನಿರಾಶೆಯಾಗಿದೆ ಎಂದು ಹೇಳಿದರು.
ಇದೇ ವೇಳೆ ಮೈಕ್ರೋ ಫೈನಾನ್ಸ್ ಬರುವುದು ಕೇಂದ್ರ ಸರ್ಕಾರದ ಕೆಳಗೆ, ಅದರ ಬಗ್ಗೆ ಏನು ಕ್ರಮ ಕೈಗೊಂಡಿದಾರೆ? ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಜನರು ಸಾಯುತ್ತಿದ್ದಾರೆ. ಜನರ ನೋವು ಅವರಿಗೆ ಕಾಣುತ್ತಿಲ್ಲವೇ? ಫೈನಾನ್ಸ್ ನವರ ತೊಂದರೆಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ? ಜನರ ಹಿತ ಹೇಗೆ ಕಾಪಾಡಬಹುದೆಂದು ನಾವು ಒಂದೇ ವಾರದಲ್ಲಿ ಸುಗ್ರೀವಾಜ್ಞೆ ಮೂಲಕವಾಗಿ ಕಾನೂನು ಜಾರಿ ಮಾಡುತ್ತಿದ್ದೇವೆ. ಫೈನಾನ್ಸ್ ನವರಿಂದ ಆಗುತ್ತಿರುವ ತೊಂದರೆಗಳನ್ನು ನಿಯಂತ್ರಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ. ಆದರೆ ಕೇಂದ್ರ ಸರ್ಕಾರದವರು ಏನು ಮಾಡುತ್ತಿದ್ದಾರೆ? ಎಂದು ಪ್ರಶ್ನಿಸಿದರು.