ಹಾವೇರಿ: ಮನೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಪಟಾಕಿಗೆ ಬೆಂಕಿ ತಗುಲಿ ವ್ಯಕ್ತಿ ಸಾವನ್ನಪ್ಪಿದ ಘಟನೆ ಹಾವೇರಿ ಜಿಲ್ಲೆ ಸವಣುರು ಪಟ್ಟಣದ ಮಾಲತೇಶ ನಗರದಲ್ಲಿ ನಡೆದಿದೆ.
ಷಣ್ಮುಖಪ್ಪ ದೇವಗಿರಿ(55) ಮೃತಪಟ್ಟ ವ್ಯಕ್ತಿ ಎಂದು ಹೇಳಲಾಗಿದೆ. ದೀಪಾವಳಿ ಸಂದರ್ಭದಲ್ಲಿ ಮಾರಾಟಕ್ಕೆ ತಂದಿದ್ದ ಪಟಾಕಿ ಉಳಿದ ಕಾರಣ ಮನೆಯಲ್ಲಿಯೇ ಸಂಗ್ರಹಿಸಿ ಇಡಲಾಗಿತ್ತು. ಪರವಾನಿಗೆ ಪಡೆಯದೆ ಅಕ್ರಮವಾಗಿ ಮನೆಯಲ್ಲಿ ಪಟಾಕಿ ಸಂಗ್ರಹಿಸಿ ಇಟ್ಟಿದ್ದು, ಸಮೀಪದಲ್ಲಿಯೇ ಷಣ್ಮುಖಪ್ಪ ಮಲಗಿದ್ದರು. ಈ ವೇಳೆ ಆಕಸ್ಮಿಕವಾಗಿ ಬೆಂಕಿ ಕಿಡಿ ತಾಗಿ ಪಟಾಕಿ ಸಿಡಿದಿವೆ. ಮಲಗಿದ್ದ ಷಣ್ಮುಖಪ್ಪ ಬೆಂಕಿಯಿಂದ ಸುಟ್ಟು ಕರಕಲಾಗಿದ್ದಾರೆ. ಸವಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.