ತೆಲಂಗಾಣದ ವನಪರ್ತಿ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ವಸತಿ ಶಾಲೆಯ ವಾರ್ಡನ್ ಒಬ್ಬ, ವಿದ್ಯಾರ್ಥಿನಿಯರ ಹಾಸ್ಟೆಲ್ ನಲ್ಲೇ ಯುವಕನೊಬ್ಬನ ಜೊತೆ ದೈಹಿಕ ಸಂಬಂಧ ಹೊಂದಿದ್ದು, ಇದೀಗ ಆತನನ್ನು ಅಮಾನತುಗೊಳಿಸಲಾಗಿದೆ.
ಕೊತ್ತಕೋಟ ಮಂಡಲದ ಅಮದಬಾಕುಳ ಗ್ರಾಮದ ಟಿಜಿ ಮಾದರಿ ಶಾಲೆ ಹಾಗೂ ಬಾಲಕಿಯರ ವಸತಿ ನಿಲಯದಲ್ಲಿ ಈ ಘಟನೆ ನಡೆದಿದ್ದು, ಕಳೆದ ಕೆಲವು ದಿನಗಳಿಂದ ತಡರಾತ್ರಿ ಹಾಸ್ಟೆಲ್ ಸುತ್ತಮುತ್ತ ಅನುಮಾನಾಸ್ಪದ ವಾಹನ ಸಂಚಾರವನ್ನು ಗ್ರಾಮಸ್ಥರು ಗಮನಿಸಿದ್ದರು.
ಈ ಬೆಳವಣಿಗೆಯಿಂದ ಆತಂಕಗೊಂಡ ಗ್ರಾಮಸ್ಥರು ಸೋಮವಾರ ರಾತ್ರಿ ದ್ವಿಚಕ್ರ ವಾಹನವನ್ನು ಅಡ್ಡ ಹಾಕಿದ್ದಾರೆ. ಈ ಕುರಿತು ವಿಚಾರಿಸಿದಾಗ ಹಾಸ್ಟೆಲ್ ವಾರ್ಡನ್, ಸ್ಥಳೀಯ ನಿವಾಸಿ ರವಿ ಎಂಬಾತನ ಜೊತೆ ಅಕ್ರಮ ಸಂಬಂಧದಲ್ಲಿ ತೊಡಗಿರುವುದು ಬೆಳಕಿಗೆ ಬಂದಿದೆ. ಇವರಿಬ್ಬರು ಹಾಸ್ಟೆಲ್ ಆವರಣದಲ್ಲಿ ಹಲವು ಬಾರಿ ಶಾರೀರಿಕ ಸಂಬಂಧದಲ್ಲಿ ತೊಡಗಿದ್ದರು ಎಂಬುದಕ್ಕೆ ಗ್ರಾಮಸ್ಥರು ಸಾಕ್ಷ್ಯ ಒದಗಿಸಿದ್ದಾರೆ. ಘಟನೆಯ ಬಗ್ಗೆ ಮೌನವಾಗಿರುವಂತೆ ವಾರ್ಡನ್, ಹಾಸ್ಟೆಲ್ ಹುಡುಗಿಯರಿಗೆ ಬೆದರಿಕೆ ಹಾಕಿದ್ದ ಎಂದು ಆರೋಪಿಸಲಾಗಿದೆ.
ಈ ಕುರಿತು ಗ್ರಾಮಸ್ಥರು ಮಂಡಲ ಶಿಕ್ಷಣಾಧಿಕಾರಿ ಕೃಷ್ಣಯ್ಯ ಅವರಿಗೆ ದೂರು ನೀಡಿದ್ದು, ಕೂಡಲೇ ಸ್ಪಂದಿಸಿದ ಅವರು ವಾರ್ಡನ್ ನನ್ನು ಅಮಾನತುಗೊಳಿಸಿದ್ದಾರೆ. ಇಂತಹ ಘಟನೆಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದು, ಅಧಿಕಾರಿಗಳು ಸಮಗ್ರ ತನಿಖೆ ನಡೆಸಬೇಕು ಎಂದಿದ್ದಾರೆ.