ಬೆಂಗಳೂರು: ಕಳೆದ ಒಂದು ತಿಂಗಳಿನಿಂದ ಏರು ಗತಿಯಲ್ಲಿ ಸಾಗುತ್ತಿರುವ ಬೆಳ್ಳುಳ್ಳಿ ದರ ಮುಗಿಲು ಮುಟ್ಟಿದ್ದು, ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ.
ಮಂಗಳೂರು ಮಾರುಕಟ್ಟೆಯಲ್ಲಿ ಕೆಜಿ ಬೆಳ್ಳುಳ್ಳಿ ದರ 420 ರೂ.ಗೆ ತಲುಪಿದೆ. ವಾರದ ಹಿಂದೆಯಷ್ಟೇ ಗುಣಮಟ್ಟದ ಬೆಳ್ಳುಳ್ಳಿಗೆ 380 ರೂ. ದರವಿತ್ತು. ಇದೀಗ 420ಗೆ ತಲುಪಿದ್ದು, ಜನಸಾಮಾನ್ಯರಿಗೆ ಹೊರೆಯಾಗಿ ಪರಿಣಮಿಸಿದೆ.
ರಾಜ್ಯದ ಬಹುತೇಕ ಭಾಗದಲ್ಲಿ ಬೆಳ್ಳುಳ್ಳಿ ದರ ಕೆಜಿಗೆ 400 ರೂ.ವರೆಗೆ ಇದೆ. ಸಣ್ಣ ಗಾತ್ರದ ಸಣ್ಣ ಎಸಳಿನ ಬೆಳ್ಳುಳ್ಳಿ ಕೆಜಿಗೆ 310 ರೂ., ಗುಣಮಟ್ಟದ ಬೆಳ್ಳುಳ್ಳಿ ಕೆಜಿಗೆ 420ರೂ., ಮಧ್ಯಮ ಗಾತ್ರದ ಬೆಳ್ಳುಳ್ಳಿ 400 ರೂ. ಮಾರಾಟವಾಗುತ್ತಿದೆ.
ಇನ್ನು ಈರುಳ್ಳಿ ದರ ಕೂಡ ಏರುಗತಿಯಲ್ಲಿ ಸಾಗಿದೆ. ಸಾಮಾನ್ಯ ಈರುಳ್ಳಿ ಕೆಜಿಗೆ 50 ರಿಂದ 60 ರೂ., ಗುಣಮಟ್ಟದ ಈರುಳ್ಳಿ 70 ರೂ.ವರೆಗೆ ಮಾರಾಟವಾಗುತ್ತಿದೆ. ಅದೇ ರೀತಿ ನುಗ್ಗೆಕಾಯಿ, ಲಿಂಬೆಹಣ್ಣು ದರ ಕೂಡ ಏರಿಕೆಯಾಗಿದೆ.