ಬೆಂಗಳೂರು : ರಾಜ್ಯ ಸರ್ಕಾರಿ ನೌಕರರು ಇಂದಿನಿಂದ ಕೆಂಪು-ಹಳದಿ ಟ್ಯಾಗ್ ಧರಿಸುವುದು ಕಡ್ಡಾಯವಾಗಿದೆ.
ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ’ ಅಭಿಯಾನದಡಿ ಎಲ್ಲಾ ಸರ್ಕಾರಿ ನೌಕರರು ಕೆಂಪು-ಹಳದಿ ಬಣ್ಣದ ಗುರುತಿನ ಚೀಟಿಯ ಕೊರಳುದಾರವನ್ನು (ಟ್ಯಾಗ್) ಹಾಕಿಕೊಳ್ಳುವುದರ ಕುರಿತು ರಾಜ್ಯ ಸರ್ಕಾರ ಮಹತ್ವದ ಸುತ್ತೋಲೆ ಹೊರಡಿಸಿತ್ತು. ಇಂದಿನಿಂದ ಈ ನಿಯಮ ಪಾಲಿಸುವುದು ಕಡ್ಡಾಯವಾಗಿದೆ.
ನಮ್ಮ ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣಗೊಳಿಸಿ 50 ವರ್ಷಗಳು ಪೂರೈಸಿರುವ ಸುಸಂದರ್ಭದಲ್ಲಿ “ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ” ಅಭಿಯಾನದಡಿ ಎಲ್ಲಾ ರಾಜ್ಯ ಸರ್ಕಾರಿ ನೌಕರರು ಕೆಂಪು-ಹಳದಿ ಬಣ್ಣಗಳನ್ನು ಒಳಗೊಂಡಿರುವ ಕೊರಳುದಾರ (ಟ್ಯಾಗ್) ಹೊಂದಿದ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಧರಿಸಬೇಕೆಂದು ಸರ್ಕಾರವು ನಿರ್ಣಯಿಸಿದೆ.
ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳು, ನಿಗಮ, ಮಂಡಳಿ, ನಿರ್ದೇಶನಾಲಯ, ಆಯುಕ್ತಾಲಯ ಇತ್ಯಾದಿ ಸರ್ಕಾರಿ ಮತ್ತು ಸರ್ಕಾರಿ ಸ್ವಾಮ್ಯದ ಕಛೇರಿಗಳಲ್ಲಿ ಕರ್ತವ್ಯ ನಿರ್ವಹಿಸುವ ಎಲ್ಲಾ ಅಧಿಕಾರಿ/ ಸಿಬ್ಬಂದಿಗಳು ತಮ್ಮ ಇಲಾಖೆ/ಸಂಸ್ಥೆಯ ಗುರುತಿನ ಚೀಟಿಯನ್ನು ಧರಿಸಲು ಅನುವಾಗುವಂತೆ ಹಳದಿ ಮತ್ತು ಕೆಂಪು ಬಣ್ಣದ ಕೊರಳುದಾರವನ್ನು ಒದಗಿಸಲು ತಮ್ಮ ಇಲಾಖೆ/ಸಂಸ್ಥೆಯ ಸಕ್ಷಮ ಪ್ರಾಧಿಕಾರಗಳು ಕೂಡಲೇ ನಿಯಮಗಳನುಸಾರ ಕ್ರಮವಹಿಸುವಂತೆ ತಿಳಿಸಿದೆ.