ಬೆಂಗಳೂರು: ಗೌರಿ, ಗಣೇಶ ಹಬ್ಬ ಮುಗಿದ ಬೆನ್ನಲ್ಲೇ ಚಿಕನ್ ಮತ್ತು ಮಟನ್ ಗೆ ಭಾರಿ ಬೇಡಿಕೆ ಬಂದಿದ್ದು, ಬೆಲೆ ಕೂಡ ಏರಿಕೆಯಾಗಿ ಗ್ರಾಹಕರು ಕಂಗಾಲಾಗಿದ್ದಾರೆ.
ಶ್ರಾವಣ ಮಾಸದ ಸಂದರ್ಭದಲ್ಲಿ ಬಹುತೇಕರು ಮಾಂಸಹಾರ ಸೇವಿಸುವುದಿಲ್ಲ. ಹೀಗಾಗಿ ಬೇಡಿಕೆ ಕಡಿಮೆಯಾಗಿ ಚಿಕನ್ ಮತ್ತು ಮಟನ್ ದರ ಕಡಿಮೆಯಾಗಿತ್ತು. ಗಣೇಶ ಚತುರ್ಥಿ ಮುಗಿದು ಪ್ರತಿಷ್ಠಾಪನೆ ಮಾಡಿದ್ದ ಗಣಪತಿಗಳನ್ನು ವಿಸರ್ಜನೆ ಮಾಡಲಾಗುತ್ತಿದೆ. ಒಂದು ತಿಂಗಳು ಚಿಕನ್, ಮಟನ್ ಅಡುಗೆಗೆ ಬ್ರೇಕ್ ಹಾಕಿದ್ದವರು ಮತ್ತೆ ಮಾಂಸಾಹಾರ ಮಾಡತೊಡಗಿದ್ದಾರೆ.
ಹೀಗೆ ಬೇಡಿಕೆ ಹೆಚ್ಚಾಗುತ್ತಿದ್ದಂತೆ ಕೋಳಿ ಮತ್ತು ಕುರಿ ಮಾಂಸದ ದರ ಕೂಡ ಹೆಚ್ಚಾಗಿದೆ. ಕೆಜಿಗೆ 100ರಿಂದ 150ರೂ. ಆಸುಪಾಸಿನಲ್ಲಿದ್ದ ಚಿಕನ್ ದರ 250 ರಿಂದ 260 ರೂ.ಗೆ ಏರಿಕೆಯಾಗಿದೆ. ಮಟನ್ ದರ ಕೆಜಿಗೆ 800 ರಿಂದ 900 ರೂ.ವರೆಗೆ ಏರಿಕೆಯಾಗಿದ್ದು, ಮುಂದಿನ ತಿಂಗಳಲ್ಲಿ ಮತ್ತಷ್ಟು ದರ ಏರಿಕೆಯಾಗುವ ಸಾಧ್ಯತೆ ಇದೆ. ಆಯುಧ ಪೂಜೆ ಕಾರಣಕ್ಕೆ ಬೇಡಿಕೆ ಹೆಚ್ಚಾಗಿ ಚಿಕನ್ ಮತ್ತು ಮಟನ್ ದರ ಮತ್ತೆ ಏರಿಕೆಯಾಗಬಹುದು ಎನ್ನಲಾಗಿದೆ.