ಗುಜರಾತ್ ನ ಸೂರತ್‌ನ ಲಾಲ್ಗೇಟ್ ಪ್ರದೇಶದಲ್ಲಿ ಗಣೇಶ ಉತ್ಸವದ ವೇಳೆ ನಡುವೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದು, ಪರಿಸ್ಥಿತಿ ಉದ್ವಿಗ್ನಗೊಂಡಿದೆ.
ಸ್ಥಳೀಯರು ನಾಲ್ಕೈದು ಆರೋಪಿಗಳನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದು, ತನಿಖೆ ಆರಂಭಿಸಲಾಗಿದೆ.
ಕಲ್ಲು ತೂರಾಟದಲ್ಲಿ ಹಲವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಈ ಕೃತ್ಯದಿಂದ ಸುತ್ತಮುತ್ತಲಿನ ಪ್ರದೇಶದಲ್ಲಿ ಪರಿಸ್ಥಿತಿ ಹದಗೆಟ್ಟು, ನಂತರ ಆಕ್ರೋಶಗೊಂಡ ಗುಂಪು ಸೈಯದ್‌ಪುರ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದೆ. ದುಷ್ಕರ್ಮಿಗಳ ಬಂಧನಕ್ಕೆ ಒತ್ತಾಯಿಸಿದೆ.
ಪೊಲೀಸರು ಪ್ರತಿಭಟನಾಕಾರರ ಮೇಲೆ ಲಾಠಿ ಚಾರ್ಜ್ ನಡೆಸಿದ್ದಾರೆ. ಅಶ್ರುವಾಯುಗಳನ್ನು ಸಿಡಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಸುಮಾರು 35 ಮಂದಿಯನ್ನು ಪೊಲೀಸ್ ಇಲಾಖೆ ಬಂಧಿಸಿದೆ.
ಗುಜರಾತ್ ಗೃಹ ಖಾತೆ ರಾಜ್ಯ ಸಚಿವ ಹರ್ಷ ಸಂಘವಿ ಸೂರತ್‌ಗೆ ತೆರಳಿದ್ದು, ಪರಿಸ್ಥಿತಿಯ ಉಸ್ತುವಾರಿ ವಹಿಸಲಿದ್ದಾರೆ. ಸೂರತ್ ಉತ್ತರ ಶಾಸಕ ಕಾಂತಿ ಬಲರ್, ಸೂರತ್ ಸಂಸದ ಮುಖೇಶ್ ದಲಾಲ್ ಕೂಡ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ.
ಸೂರತ್ ಪೊಲೀಸ್ ಕಮಿಷನರ್ ಎ.ಎಸ್. ಗೆಹ್ಲೊಟ್, ಶಾಂತಿ ಮತ್ತು ಸೌಹಾರ್ದತೆ ಕಾಪಾಡುವಂತೆ ಸ್ಥಳೀಯರಿಗೆ ಮನವಿ ಮಾಡಿದ್ದಾರೆ.