HomeKarnatakaBIG NEWS: ವಿದ್ಯಾವಂತರೇ ಹೆಚ್ಚೆಚ್ಚು ಜಾತಿವಾದಿಗಳಾಗುತ್ತಿರುವುದು ದುರಂತ: ಸಿಎಂ ಸಿದ್ದರಾಮಯ್ಯ ಕಳವಳ

BIG NEWS: ವಿದ್ಯಾವಂತರೇ ಹೆಚ್ಚೆಚ್ಚು ಜಾತಿವಾದಿಗಳಾಗುತ್ತಿರುವುದು ದುರಂತ: ಸಿಎಂ ಸಿದ್ದರಾಮಯ್ಯ ಕಳವಳ

ಬೆಂಗಳೂರು: ಜಾತಿ-ಧರ್ಮದ ಹೆಸರಲ್ಲಿ ಸಮಾಜವನ್ನು ಒಡೆಯುತ್ತಾ ಹೋದಂತೆ ಅಸಮಾನತೆ ಹೆಚ್ಚುತ್ತದೆ. ಜಾತಿ ವ್ಯವಸ್ಥೆ ಕಾರಣದಿಂದ ಹಲವರು ಶಿಕ್ಷಣದಿಂದ ವಂಚಿತರಾದರು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ಬೆಂಗಳೂರಿನ ಗಾಂಧಿ ಭವನದಲ್ಲಿ ಆಯೋಜಿಸಲಾಗಿದ್ದ “21ನೇ ಶತಮಾನಕ್ಕೆ ಮಹಾತ್ಮಗಾಂಧೀಜಿ” ಅಂತಾರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿ ಸಿಎಂ ಸಿದ್ದರಾಮಯ್ಯ, ಜಾತಿ ವ್ಯವಸ್ಥೆಯಿಂದ ಬಹುಜನರು ಶಿಕ್ಷಣದಿಂದ ವಂಚಿತರಾದರು ಹೀಗಾಗಿ ಅಸಮಾನತೆ ಹೆಚ್ಚಾಯ್ತು. ವಿದ್ಯಾವಂತರೇ ಹೆಚ್ಚೆಚ್ಚು ಜಾತಿವಾದಿಗಳಾಗುತ್ತಿರುವುದು ದುರಂತ. ಜಾತಿ ಅಸಮಾನತೆಯ ಪೋಷಕರೇ ಮಹಾತ್ಮಗಾಂಧಿಯವರನ್ನು ಕೊಂದರು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗಾಂಧೀಜಿ ವಿಚಾರಗಳು, ಸಮಾಜಕ್ಕೆ ನೀಡಿದ ಮಾರ್ಗದರ್ಶನಗಳು 20ನೇ ಶತಮನಕ್ಕೆ ಮಾತ್ರ ಸೀಮಿತವಾಗಿಲ್ಲ. ಈಗಿನ ಕಾಲಕ್ಕೂ ಪ್ರಸ್ತುತವಾಗಿವೆ.‌ ಗಾಂಧೀಜಿಯವರು ಶಾಂತಿ, ಸತ್ಯ, ನ್ಯಾಯ ಮತ್ತು ಬ್ರಾತೃತ್ವವನ್ನು ಬದುಕಿನುದ್ದಕ್ಕೂ ಆಚರಿಸಿಕೊಂಡು ಬಂದಿದ್ದಾರೆ. ಇಡೀ ವಿಶ್ವವೇ ಪರಸ್ಪರ ಪ್ರೀತಿಸುವ ಗುಣವನ್ನು ರೂಢಿಸಿಕೊಂಡರೆ ಇಡೀ ಸಮಾಜ ನೆಮ್ಮದಿಯಿಂದ ಇರಬಹುದು ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮನುಷ್ಯ ತನ್ನ ನೆಮ್ಮದಿಗಾಗಿ ಬೇರೆ ಗ್ರಹಗಳನ್ನು ಹುಡುಕಿಕೊಂಡು ಹೋಗುವಂತಾಗಬಾರದು ಎನ್ನುವ ಸ್ಟೀಫನ್ ಹಾಕಿಂಗ್ ಅವರ ಮಾತನ್ನು ಪ್ರಸ್ತಾಪಿಸಿ, ಮನುಷ್ಯ ಮನುಷ್ಯರ ನಡುವೆ ಸಹಿಷ್ಣುತೆ ರೂಢಿಸಿಕೊಳ್ಳದಿದ್ದರೆ ಸರ್ವನಾಶವಾಗುತ್ತದೆ. ಕೋಮು ಭಾವನೆ ಹೀಗೇ ಬೆಳೆದರೆ ಕವೆಂಪು ಅವರ ವಿಶ್ವ ಮಾನವ ಆಶಯ ಈಡೇರುವುದು ಕಷ್ಟವಾಗುತ್ತದೆ ಎಂದರು.

ಪ್ರಕೃತಿ ನಮ್ಮ ಅಗತ್ಯಗಳನ್ನು ಈಡೇರಿಸುತ್ತದೆಯೇ ಹೊರತು, ದುರಾಸೆಗಳನ್ನು ಅದು ಪೂರೈಸುವುದಿಲ್ಲ ಎನ್ನುವುದು ಗಾಂಧಿಯವರ ನಂಬಿಕೆಯಾಗಿತ್ತು. ಕೇರಳದ ವಯನಾಡ್ ಮತ್ತು ರಾಜ್ಯದ ನಾನಾ ಕಡೆ ನಡೆಯುತ್ತಿರುವ ಪರಿಸರ ಅವಘಡಗಳಿಗೆ ಮನುಷ್ಯನ ದುರಾಸೆಗಳೇ ಕಾರಣವಾಗಿದೆ ಎಂದರು.

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದರೆ ಅವರ ಕಾಲಗುಣದಿಂದ ರಾಜ್ಯಕ್ಕೆ ಬರಗಾಲ ಬರುತ್ತದೆ ಎಂದು ಸಾರ್ವಜನಿಕ ವ್ಯಕ್ತಿಗಳೇ ಮೌಡ್ಯ ಬಿತ್ತುವ ಕುಟಿಲ ಪ್ರಯತ್ನ ಮಾಡಿದ್ದರು. ಆದರೆ ಈಗ ಸಿಕ್ಕಾಪಟ್ಟೆ ಮಳೆ ಬರುತ್ತಿದೆ. ಬಹಳ ಮಂದಿ ಶಿಕ್ಷಿತರೇ ಕಂದಾಚಾರ, ಕರ್ಮ ಸಿದ್ಧಾಂತ, ಮೌಡ್ಯವನ್ನು ಆಚರಿಸುತ್ತಾರೆ. ಇದಕ್ಕೆ ಸರಿಯಾದ ವೈಜ್ಞಾನಿಕ ಶಿಕ್ಷಣದ ಕೊರತೆಯೇ ಕಾರಣ. 850 ವರ್ಷಗಳ ಹಿಂದೆಯೇ ಬಸವಾದಿ ಶರಣರು ಕರ್ಮ ಸಿದ್ಧಾಂತವನ್ನು ಸಾರಾಸಗಟಾಗಿ ತಿರಸ್ಕರಿಸಿದ್ದರು. ಆದರೆ ಈಗಿನ ಕೆಲವು ಶಿಕ್ಷಿತರೇ ಕರ್ಮ ಸಿದ್ಧಾಂತದಲ್ಲಿ ನಂಬಿಕೆ ಇಟ್ಟಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ನೆಹರೂ ಅವರು ವೈಜ್ಞಾನಿಕ ಮತ್ತು ವೈಚಾರಿಕ ಮಾರ್ಗದಲ್ಲಿ ಸಮಾಜವನ್ನು ಸನ್ನದ್ದಗೊಳಿಸಿ ದೇಶವನ್ನು ಮುನ್ನಡೆಸುತ್ತಿದ್ದರು ಎಂದರು. ಸರ್ವರನ್ನೂ ಒಳಗೊಳ್ಳುವ ಮತ್ತು ಅಹಿಂಸೆ ಗಾಂಧಿಯವರ ಮಾರ್ಗವಾಗಿತ್ತು. ಇದನ್ನು ಯುವಜನರಿಗೆ ತಲುಪಿಸುವ ಕೆಲಸ ಆಗಬೇಕಿದೆ. ದೇಶದ ಶೇ85 ರಷ್ಟು ಆಸ್ತಿ ಶೇ1 ಶ್ರೀಮಂತರ ಕೈಗೆ ಸೇರುತ್ತಿದೆ. ಇದು ಅಪಾಯಕಾರಿ. ಈ ಆರ್ಥಿಕ ಅಸಮಾನತೆ ಹೋಗಲಾಡಿಸಲು ಗಾಂಧಿಯವರ ವಿಚಾರಗಳಲ್ಲಿ ಮಾರ್ಗಗಳಿವೆ ಎಂದರು. ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಕನಸನ್ನು ಈಡೇರಿಸಬೇಕಾಗಿದೆ.‌ ಗಾಂಧಿಯವರ ಆಶಯದಂತೆ ರಾತ್ರಿ 12 ಗಂಟೆಗೂ ನಮ್ಮ ಹೆಣ್ಣು ಮಕ್ಕಳು ನಿರ್ಭಯದಿಂದ ಓಡಾಡುವಂತಾಗಬೇಕಿದೆ ಎಂದರು.

For Latest News Updates, Join Our Whatsapp Community🚩
RELATED ARTICLES

Most Popular