ಮಲಪ್ಪುರಂ: ಮಾದಕ ವಸ್ತು ಕಳ್ಳ ಸಾಗಣೆ ಆರೋಪದ ಮೇರೆಗೆ ಓರ್ವ ರೂಪದರ್ಶಿ ಮತ್ತು ಆಕೆಯ ಮೂವರು ಸಹಚರರನ್ನು ಕೇರಳದ ಮಲಪ್ಪುರಂನಲ್ಲಿ ಪೊಲೀಸರು ಬಂಧಿಸಿದ್ದಾರೆ.
ಕಲ್ಲಿಕೋಟೆಯ ಜಿಸ್ಕಿರಾಜ್ ಬೆಂಗಳೂರಿನಲ್ಲಿ ರೂಪದರ್ಶಿಯಾಗಿ ಕೆಲಸ ಮಾಡುತ್ತಿದ್ದು, ಆಕೆ ಮತ್ತು ಸಹಚರರ ಬಳಿ ನಿಷೇಧಿತ ಮಾದಕ ವಸ್ತುಗಳಿರುವುದು ಪತ್ತೆಯಾಗಿದೆ. ಮಾಹಿತಿ ಆಧರಿಸಿ ಬೆಂಗಳೂರಿನಿಂದ ಕೇರಳಕ್ಕೆ ಜಿಸ್ಕಿರಾಜ್ ಪ್ರಯಾಣಿಸುತ್ತಿದ್ದ ಬಸ್ ತಡೆದ ಪೊಲೀಸರಿಗೆ ಪರಿಶೀಲನೆ ನಡೆಸಿದಾಗ ಆಕೆಯ ಬ್ಯಾಗ್ ನಲ್ಲಿ ನಿಷೇಧಿತ ಎಂಡಿಎಂಎ ಡ್ರಗ್ಸ್ ಪತ್ತೆಯಾಗಿದೆ.
ಜಿಸ್ಕಿರಾಜ್ ಳನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದ್ದು, ಮಲಪ್ಪುರಂನಲ್ಲಿ ವಿಚಾರಣೆಗೆ ಒಳಪಡಿಸಲಾಗಿದೆ. ಡ್ರಗ್ಸ್ ಗಳನ್ನು ಮಲಪುರಂನಲ್ಲಿರುವ ಒಬ್ಬರಿಗೆ ತಲುಪಿಸಲು ತೆಗೆದುಕೊಂಡು ಹೋಗಿದ್ದಾಗಿ ಜಿಸ್ಕಿ ಒಪ್ಪಿಕೊಂಡಿದ್ದಾಳೆ. ಆಕೆಯ ಹೇಳಿಕೆ ಆಧರಿಸಿ ಇನ್ನೂ ಮೂವರನ್ನು ಬಂಧಿಸಲಾಗಿದ್ದು, ಎಲ್ಲರೂ ಕೇರಳದವರಾಗಿದ್ದಾರೆ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ.