ಕಾರವಾರ: ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲೂಕಿನ ಶಿರೂರು ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿತ ಪ್ರಕರಣದಲ್ಲಿ ಕಣ್ಮರೆಯಾಗಿದ್ದ 5 ವರ್ಷದ ಬಾಲಕಿ ಅವಂತಿಕಾ ಮೃತದೇಹ ಪತ್ತೆಯಾಗಿದೆ.
ಅವಘಡದಲ್ಲಿ ನಾಪತ್ತೆಯಾಗಿದ್ದ ಒಂದೇ ಕುಟುಂಬದ ಐವರ ಪೈಕಿ ಮೂವರ ಮೃತ ದೇಹಗಳು ನಿನ್ನೆ ಪತ್ತೆಯಾಗಿದ್ದವು. ಬಾಲಕಿ ಅವಂತಿಕಾ ಮೃತದೇಹ ಇಂದು ಬೆಳಗ್ಗೆ ಗಂಗೆ ಕೊಳ್ಳದ ಸಮುದ್ರ ತೀರದಲ್ಲಿ ಪತ್ತೆಯಾಗಿದೆ.
ಲಕ್ಷ್ಮಣ ನಾಯಕ, ಶಾಂತಿ, ಪುತ್ರ ರೋಷನ್ ಮೃತದೇಹ ಪತ್ತೆಯಾದ ಬಳಿಕ ಇದೀಗ ಆವಂತಿಕಾ ಮೃತದೇಹ ಪತ್ತೆಯಾಗಿದ್ದು, ಗೋಕರ್ಣ ಸರ್ಕಾರಿ ಆಸ್ಪತ್ರೆಗೆ ಮೃತದೇಹ ಸಾಗಿಸಲಾಗಿದೆ. ದುರಂತದಲ್ಲಿ ಸುಮಾರು 20 ಮಂದಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದ್ದು, ಮಣ್ಣು ತೆರವು ಕಾರ್ಯಾಚರಣೆ ಮುಂದುವರೆದಿದೆ.