ಕಾಫಿ ಪ್ರಪಂಚದಾದ್ಯಂತ ಕೋಟ್ಯಾಂತರ ಜನರ ನೆಚ್ಚಿನ ಪಾನೀಯ. ಆಕರ್ಷಕ ಪರಿಮಳ ಮತ್ತು ರುಚಿಯೊಂದಿಗೆ ಕಾಫಿ ಜನರನ್ನು ಸೆಳೆಯುತ್ತದೆ. ಕಾಫಿ ನಮ್ಮ ಆಯಾಸವನ್ನು ನಿವಾರಿಸಬಲ್ಲದು, ಮನಸ್ಥಿತಿಯನ್ನೂ ಸುಧಾರಿಸಬಲ್ಲದು. ಎಲ್ಲಾ ರುತುವಿನಲ್ಲೂ ಇಷ್ಟಪಟ್ಟು ಕುಡಿಯುವಂತಹ ಪಾನೀಯ ಇದು. ಆದರೆ ಕಾಫಿಯ ಅತಿಯಾದ ಸೇವನೆ ಆರೋಗ್ಯಕ್ಕೆ ಹಾನಿಕಾರಕ. ಹೆಚ್ಚು ಕಾಫಿ ಕುಡಿಯುವುದರಿಂದ ಆತಂಕ, ನಿದ್ರಾಹೀನತೆ, ಅಧಿಕ ರಕ್ತದೊತ್ತಡ ಹೀಗೆ ಅನೇಕ ಸಮಸ್ಯೆಗಳಾಗುತ್ತವೆ.
ಕಾಫಿಯಲ್ಲಿ ಕೆಫೀನ್ ಎಂಬ ಉತ್ತೇಜಕವಿದೆ, ಇದು ಮೆದುಳನ್ನು ಸಕ್ರಿಯಗೊಳಿಸುತ್ತದೆ. ಏಕಾಗ್ರತೆ ಮತ್ತು ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ. ಹಾಗಾಗಿ ಒಂದು ದಿನದಲ್ಲಿ ಎಷ್ಟು ಕಾಫಿ ಕುಡಿಯುವುದು ಸುರಕ್ಷಿತ ಎಂಬುದನ್ನು ತಿಳಿದುಕೊಳ್ಳಬೇಕು.
ಕಾಫಿಯ ಪ್ರಯೋಜನಗಳು…
ಮೆದುಳಿನ ಆರೋಗ್ಯ: ಕಾಫಿ ಕುಡಿಯುವುದರಿಂದ ಮೆದುಳಿನ ಆರೋಗ್ಯ ಸುಧಾರಿಸುತ್ತದೆ. ಆಲ್ಝೈಮರ್ ಮತ್ತು ಪಾರ್ಕಿನ್ಸನ್‌ನಂತಹ ಕಾಯಿಲೆಗಳ ಅಪಾಯವನ್ನು ಇದು ಕಡಿಮೆ ಮಾಡುತ್ತದೆ.
ಮಧುಮೇಹಕ್ಕೆ ಮದ್ದು: ಕಾಫಿ ಕುಡಿಯುವುದರಿಂದ ಟೈಪ್ 2 ಮಧುಮೇಹದ ಅಪಾಯವನ್ನು ಕಡಿಮೆ ಮಾಡಬಹುದು ಎಂಬುದು ಕೆಲವು ಅಧ್ಯಯನಗಳಲ್ಲಿ ಸಾಬೀತಾಗಿದೆ.
ತೂಕ ಇಳಿಕೆ: ಕಾಫಿ ನಮ್ಮ ಚಯಾಪಚಯವನ್ನು ಹೆಚ್ಚಿಸುತ್ತದೆ ಮತ್ತು ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ.
ಖಿನ್ನತೆಗೆ ಪರಿಹಾರ: ಕಾಫಿ ಕುಡಿಯುವುದರಿಂದ ಖಿನ್ನತೆಯ ಅಪಾಯವನ್ನು ಕಡಿಮೆ ಮಾಡಬಹುದು. ಆದರೆ ಸೇವನೆ ಮಿತವಾಗಿರಲಿ.
ಅಧಿಕ ಕಾಫಿ ಸೇವನೆಯ ಅಪಾಯ…
* ಕೆಫೀನ್ ಒಂದು ಉತ್ತೇಜಕ, ಅದು ನಿದ್ರೆಗೆ ಅಡ್ಡಿಪಡಿಸುತ್ತದೆ.
* ಅತಿಯಾದ ಕೆಫೀನ್ ಸೇವನೆ ಆತಂಕ ಮತ್ತು ಹೆದರಿಕೆಯನ್ನು ಹೆಚ್ಚಿಸುತ್ತದೆ.
* ಹೆಚ್ಚು ಕಾಫಿ ಸೇವನೆಯಿಂದ ಅಸಿಡಿಟಿ ಮತ್ತು ಅಜೀರ್ಣ ಉಂಟಾಗುತ್ತದೆ.
* ಕೆಫೀನ್ ಹೃದಯ ಬಡಿತ ಮತ್ತು ರಕ್ತದೊತ್ತಡವನ್ನು ಹೆಚ್ಚಿಸುತ್ತದೆ.
* ಗರ್ಭಿಣಿಯರು ಕಡಿಮೆ ಕಾಫಿ ಕುಡಿಯಬೇಕು, ಏಕೆಂದರೆ ಇದು ಗರ್ಭಪಾತ ಅಥವಾ ಕಡಿಮೆ ತೂಕದ ಮಗುವಿನ ಜನನಕ್ಕೆ ಕಾರಣವಾಗಬಹುದು.
ತಜ್ಞರ ಪ್ರಕಾರ ಒಬ್ಬ ವ್ಯಕ್ತಿ 400 ಮಿಲಿ ಗ್ರಾಂಗಿಂತ ಹೆಚ್ಚು ಕೆಫೀನ್ ಅನ್ನು ಸೇವಿಸಬಾರದು. ಇದು ಸರಿಸುಮಾರು 4 ಕಪ್ ಕಾಫಿಗೆ ಸಮನಾಗಿರುತ್ತದೆ.