ನೈರುತ್ಯ ಪದವೀಧರರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಳೆ ಬೆಳಗ್ಗೆ 11 ಗಂಟೆಗೆ ಮೈಸೂರಿನ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ನಾಮಪತ್ರ ಸಲ್ಲಿಸುತ್ತೇನೆ ಎಂದು ಅಭ್ಯರ್ಥಿ ಆಯನೂರು ಮಂಜುನಾಥ್ ಹೇಳಿದರು.

ಅವರು ಇಂದು ಶಿವಮೊಗ್ಗದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ, ವಿಧಾನ ಪರಿಷತ್ ಚುನಾವಣೆಗೆ ಇನ್ನೂ ಕೇವಲ 12 ದಿನಗಳು ಉಳಿದಿವೆ. ಇದು ನಿಜಕ್ಕೂ ಒತ್ತಡದ ಸಮಯವಾಗಿದೆ. ಈಗಾಗಲೇ ನಾನು ಪ್ರಚಾರ ಕಾರ್ಯ ಕೈಗೊಂಡಿದ್ದು, ಮತದಾರರ ತಲುಪುವ ಪ್ರಯತ್ನ ಮಾಡಿದ್ದೇನೆ. ಒಳ್ಳೆಯ ವಾತಾವರಣವಿದೆ. ಸರ್ಕಾರಿ ನೌಕರರು ನನ್ನ ಬಗ್ಗೆ ವಿಶ್ವಾಸ ಇಟ್ಟುಕೊಂಡಿದ್ದಾರೆ. ಕಳೆದ 5 ವರ್ಷದಲ್ಲಿ ನೌಕರರ ಪರವಾಗಿ ಕೆಲಸ ಮಾಡಿದ್ದೇನೆ. ಯಾವ ಸರ್ಕಾರವಿದ್ದರೂ ಕೂಡ ಧ್ವನಿ ಎತ್ತಿದ್ದೇನೆ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪ್ರಮುಖವಾಗಿ ಸರ್ಕಾರಿ ನೌಕರರ ಪಿಂಚಣಿಯ ಬಗ್ಗೆ ಮಹತ್ವದ ಚರ್ಚೆ ನಡೆಯುತ್ತಿದೆ. ಹಳೆ ಪಿಂಚಣಿ ವ್ಯವಸ್ಥೆಯನ್ನೇ ಜಾರಿಗೊಳಿಸುವುದು ನನ್ನ ಮೊದಲ ಆದ್ಯತೆಯಾಗಿದೆ. ರಾಜ್ಯದಲ್ಲಿ 2006ರ ನಂತರ ಸುಮಾರು 2.5 ಲಕ್ಷ ಸರ್ಕಾರಿ ನೌಕರರು ಹೊಸ ಪಿಂಚಣಿ ವ್ಯವಸ್ಥೆಯಲ್ಲಿದ್ದಾರೆ. ಅವರು ಪಿಂಚಣಿ ವ್ಯವಸ್ಥೆಯಿಂದ ವಂಚಿತರಾಗಿದ್ದಾರೆ. ಬಿಜೆಪಿ ಆಡಳಿತದ ಸರ್ಕಾರದಲ್ಲಿ ಸದಸ್ಯನಾಗಿದ್ದರೂ ಕೂಡ ಸರ್ಕಾರದ ವಿರುದ್ಧವೇ ಧ್ವನಿ ಎತ್ತಿದ್ದೇನೆ. ನನ್ನ ಹೋರಾಟಕ್ಕೆ ಖಂಡಿತ ಜಯ ಸಿಗುತ್ತದೆ. ಈ ಬಾರಿ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿದೆ. ಹಾಗಾಗಿ ಹಳೆ ಪಿಂಚಣಿ ವ್ಯವಸ್ಥೆ ಜಾರಿಯಾಗುವ ಖಚಿತ ವಿಶ್ವಾಸವಿದೆ ಎಂದರು.

ಇದಲ್ಲದೇ ಪೊಲೀಸರ ಸಮಸ್ಯೆಗಳು ಸಾಕಷ್ಟಿವೆ. ಔರಾದ್ಕರ್ ವರದಿ ಜಾರಿಯಾಗಬೇಕಾಗಿದೆ. ಹಾಗೆಯೇ ಅರಣ್ಯ ಮತ್ತು ಆರೋಗ್ಯ ನೌಕರರ ಸಮಸ್ಯೆಗಳಿವೆ. ಅತಿಥಿ ಉಪನ್ಯಾಸಕರ ಕಷ್ಟಗಳು ಇವೆ. ಅನುದಾನಿತ ಶಾಲಾ, ಕಾಲೇಜುಗಳ ನೌಕರರ ಸಮಸ್ಯೆಗಳು ಸಾಕಷ್ಟಿವೆ. 7ನೇ ವೇತನ ಆಯೋಗ ವರದಿ ಜಾರಿಯಾಗಬೇಕಾಗಿದೆ. ಇವುಗಳ ಬಗ್ಗೆ ನಾನು ಖಂಡಿತ ಧ್ವನಿ ಎತ್ತುತ್ತೇನೆ ಎಂದರು.

ಹೋರಾಟದ ಆಧಾರದ ಮೇಲೆ ಮತ ಕೇಳುತ್ತೇನೆಯೇ ಹೊರತೂ ಯಾವುದೇ ಜಾತಿ, ಹಣದ ಆಧಾರದ ಮೇಲೆ ಮತ ಕೇಳುವುದಿಲ್ಲ. ಕಳೆದ 42 ವರ್ಷಗಳಿಂದ ಕಾರ್ಮಿಕರ, ನೌಕರರ ಪರವಾಗಿ ಹೋರಾಟ ಮಾಡುತ್ತಾ ಬಂದಿದ್ದೇನೆ. ಅದು ನನ್ನ ಕೈ ಹಿಡಿಯುತ್ತದೆ ಎಂದರು.

ಅನೇಕ ಪದವೀಧರರು ಉನ್ನತ ಶಿಕ್ಷಣಕ್ಕಾಗಿ ಬ್ಯಾಂಕ್ ಮತ್ತು ಇತರೆ ಸಂಸ್ಥೆಗಳಿಂದ ಶೈಕ್ಷಣಿಕ ಸಾಲ ಪಡೆದುಕೊಂಡಿದ್ದಾರೆ. ಅದನ್ನು ತೀರಿಸಲಾಗದೇ ಇತ್ತ ಉದ್ಯೋಗವೂ ಇಲ್ಲದೇ ಸಂಕಷ್ಟದಲ್ಲಿದ್ದಾರೆ. ಈ ಶೈಕ್ಷಣಿಕ ಸಾಲವನ್ನು ಮನ್ನಾ ಮಾಡುವ ಬಗ್ಗೆ ವಿಧಾನ ಪರಿಷತ್ ನಲ್ಲಿ ಧ್ವನಿ ಎತ್ತುತ್ತೇನೆ ಎಂದರು.

ಎಸ್.ಪಿ. ದಿನೇಶ್ ಅವರು ಬಂಡಾಯವಾಗಿ ಸ್ಪರ್ಧೆ ಮಾಡುತ್ತಾರಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಮತ್ತು ಪಕ್ಷದ ಮುಖಂಡರು ಈ ಬಗ್ಗೆ ಅವರ ಜೊತೆ ಮಾತನಾಡಿದ್ದೇವೆ. ಅವರು ಒಂದು ಪಕ್ಷ ನಾಮಪತ್ರ ಸಲ್ಲಿಸಿದರೆ ವಾಪಸ್ ತೆಗೆದುಕೊಳ್ಳುವ ನಂಬಿಕೆ ಇದೆ. ಪಕ್ಷಾಂತರಿಯನ್ನು ಅವರು ವಿರೋಧಿಸುತ್ತಾರೆ. ಅವರು ಪಕ್ಷ ನಿಷ್ಠರು. ಪಕ್ಷದ ಮಾತನ್ನು ಪಾಲಿಸಿಯೇ ಪಾಲಿಸುತ್ತಾರೆ. ಅವರು ಕಳಂಕವನ್ನು ಅಂಟಿಸಿಕೊಳ್ಳುವುದಿಲ್ಲ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಸದಸ್ಯ ವೈ.ಹೆಚ್. ನಾಗರಾಜ್, ಪ್ರಮುಖರಾದ ಶಿ.ಜು. ಪಾಶ, ಸೈಯದ್ ವಾಹಿದ್ ಅಡ್ಡು, ಧೀರರಾಜ್ ಹೊನ್ನವಿಲೆ, ಕೃಷ್ಣ, ಹಿರಣ್ಣಯ್ಯ, ಲಕ್ಷ್ಮಣಪ್ಪ ಉಪಸ್ಥಿತರಿದ್ದರು.

For Latest News Updates, Join Our Whatsapp Community🚩
RELATED ARTICLES

Most Popular