ನವದೆಹಲಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಬಿಜೆಪಿ ನಾಯಕ ತರುಣ್ ಚುಗ್ ಸೇರಿದಂತೆ ಹೊಸದಾಗಿ ಆಯ್ಕೆಯಾಗಿರುವ 8 ರಾಜ್ಯಸಭೆ ಸದಸ್ಯರು ಸೋಮವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ರಾಜ್ಯಸಭೆ ಸಭಾಪತಿಗಳಾದ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ನೂತನವಾಗಿ ಆಯ್ಕೆಯಾದ, ಮರು ಆಯ್ಕೆಯಾದ ರಾಜ್ಯಸಭೆ ಸದಸ್ಯರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರತಿಜ್ಞಾವಿಧಿ ಬೋಧಿಸಿದ್ದಾರೆ.
ಸಿ.ಪಿ. ರಾಧಾಕೃಷ್ಣನ್ ಅವರ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂವಿಧಾನದ ಪ್ರತಿ ಹಿಡಿದು ಮಲ್ಲಿಕಾರ್ಜುನ ಖರ್ಗೆ ಪ್ರಮಾಣವಚನ ಸ್ವೀಕರಿಸಿದರು. ಈ ವೇಳೆ ಕೇಂದ್ರ ಸಚಿವರಾದ ಜೆ.ಪಿ. ನಡ್ಡಾ, ಕಿರಣ್ ರಿಜಿಜು, ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷರಾದ ಸೋನಿಯಾ ಗಾಂಧಿ, ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ. ವೇಣುಗೋಪಾಲ್, ಮುಕುಲ್ ವಾಸ್ನಿಕ್, ಜೈರಾಮ್ ರಮೇಶ್ ಇತರರು ಇದ್ದರು.
ರಾಜ್ಯಸಭೆಗೆ ಹೊಸದಾಗಿ ಮತ್ತು ಮರು ಆಯ್ಕೆಯಾದ ಮಾನ್ ಸಿಂಗ್ ಮೇರಮನ್ ಪರ್ಮಾರ್, ತರುಣ್ ಚುಗ್, ಆಲ್ಕಾ ಸಿಂಗ್, ಜಿತೇಂದ್ರ ಮೇಘಜೀ ಭಾಯ್ ಕಂಜಾರಿಯಾ, ರಾಜೇಂದ್ರ ಹೀರಾಲಾಲ್ ಜೈನ್, ಅಧಿಕಾರಿ ಮಯೂಮ್ ಶಾರದಾದೇವಿ ಅವರು ರಾಜ್ಯಸಭೆ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಜೂನ್ 25ಕ್ಕೆ ಮಲ್ಲಿಕಾರ್ಜುನ ಖರ್ಗೆ ಅವರ ರಾಜ್ಯಸಭೆ ಸದಸ್ಯತ್ವ ಕೊನೆಯಾಗಿತ್ತು. ಜೂನ್ 26 ರಿಂದ ಪೂರ್ವಾನ್ವಯವಾಗುವಂತೆ ರಾಜ್ಯಸಭೆ ವಿಪಕ್ಷ ನಾಯಕರಾಗಿ ಮಲ್ಲಿಕಾರ್ಜುನ ಖರ್ಗೆಯವರನ್ನು ಮರು ನೇಮಕ ಮಾಡಲಾಗಿದೆ.

