ಬೆಂಗಳೂರು: ವಿಧಾನಸಭೆಯಲ್ಲಿ ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ಮಂಡಿಸುತ್ತಿದ್ದ ಸಂದರ್ಭದಲ್ಲಿ ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ಘೋಷಣೆ ಕೂಗಿದ್ದ 7 ಮಂದಿಯನ್ನು ವಿಧಾನಸೌಧ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಎ. ವಿಜಯಕುಮಾರ್, ಎಸ್.ವಿ. ಸುರೇಶ್, ಎಸ್. ವೇಣುಗೋಪಾಲ್, ಎಸ್.ಎಸ್. ವಿಜಯಶೇಖರ್, ಎಸ್.ವಿ. ಶ್ರೀನಿವಾಸ್, ಸತ್ಯೇಂದ್ರ ಕುಮಾರ್, ಎಂ ರಾಜರತ್ನಂ ಬಂಧಿತರು. ವಿಧಾನಸಭೆ ದಂಡನಾಯಕ ಹೆಚ್.ಎಸ್. ಜಯಕೃಷ್ಣ ಅವರು 7 ಮಂದಿಯ ವಿಚಾರಣೆ ನಡೆಸಿ ವಿಧಾನಸಭೆ ಪೊಲೀಸರಿಗೆ ಅವರನ್ನು ಒಪ್ಪಿಸಿದ್ದಾರೆ. ಬಳಿಕ ಪೊಲೀಸರು 7 ಮಂದಿಯನ್ನು ಬಂಧಿಸಿದ್ದಾರೆ.
ವಿಧಾನಸಭೆಯ ಸಾರ್ವಜನಿಕರ ಗ್ಯಾಲರಿ ಮತ್ತು ಸಭಾಧ್ಯಕ್ಷರ ಗ್ಯಾಲರಿಯಲ್ಲಿ 7 ಜನ ಬಜೆಟ್ ಅಧಿವೇಶನ ವೀಕ್ಷಿಸುತ್ತಿದ್ದರು. ಅಲ್ಲಿಂದ ಹೊರಡುವಾಗ, ಸದಾಶಿವ ಆಯೋಗ ವರದಿ ಜಾರಿಗೊಳಿಸಿ, ಒಳ ಮೀಸಲಾತಿ ಜಾರಿ ಮಾಡಿ ಎಂದು ಘೋಷಣೆ ಕೂಗಿದ್ದು, ಮಾರ್ಷಲ್ ಗಳು ಅವರನ್ನು ವಶಕ್ಕೆ ಪಡೆದು ಸದನದ ನಿಯಮಾವಳಿ ಉಲ್ಲಂಘನೆ, ಕರ್ತವ್ಯಕ್ಕೆ ಅಡ್ಡಿ ಆರೋಪದಡಿ ಅವರನ್ನು ವಶಕ್ಕೆ ಪಡೆಯಲಾಗಿದೆ.