ರಾಜಸ್ಥಾನದ ಬಾರ್ಮೇರ್ ಜಿಲ್ಲೆಯಲ್ಲಿ ಸಿನಿಮಾವನ್ನೇ ಮೀರಿಸುವಂತಹ ಬೆಚ್ಚಿಬೀಳಿಸುವ ಘಟನೆ ಬೆಳಕಿಗೆ ಬಂದಿದೆ. ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬಳು, ಅದೇ ಆಸ್ಪತ್ರೆಯ 65 ವರ್ಷದ ಹಿರಿಯ ವೈದ್ಯರನ್ನು ಖಾಸಗಿ ಫೋಟೋಗಳ ಆಧಾರದಲ್ಲಿ ಬ್ಲ್ಯಾಕ್‌ಮೇಲ್ ಮಾಡಿ ಸುಮಾರು ₹2 ಕೋಟಿ ಹಣ ವಸೂಲಿ ಮಾಡಿರುವ ಪ್ರಕರಣ ಭಾರೀ ಸಂಚಲನ ಮೂಡಿಸಿದೆ.ವೈದ್ಯರು ನೀಡಿದ ದೂರಿನ ಮೇರೆಗೆ ಪೊಲೀಸರು ತಕ್ಷಣ ಕಾರ್ಯಾಚರಣೆ ನಡೆಸಿ ಆರೋಪಿತೆಯನ್ನು ಬಂಧಿಸಿ ತನಿಖೆ ಆರಂಭಿಸಿದ್ದಾರೆ.
ಚಹಾ ನೆಪದಲ್ಲಿ ಕೊಠಡಿಗೆ ಪ್ರವೇಶಿಸಿ ಗುಪ್ತವಾಗಿ ಫೋಟೋ ಸೆರೆ
ಪೊಲೀಸರ ಮಾಹಿತಿ ಪ್ರಕಾರ, ಕಮಲ ಅಲಿಯಾಸ್ ಕಮಲೇಶ್ ಎಂಬ ಮಹಿಳೆ ಡಿಸೆಂಬರ್ 2016ರಿಂದ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದಳು. ಹೆಚ್ಚಾಗಿ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದ ಆಕೆ, ವೈದ್ಯರಿಗೆ ಚಹಾ ತಯಾರಿಸಿ ಕೊಡುತ್ತೇನೆ ಎಂಬ ನೆಪದಲ್ಲಿ ಅವರ ಖಾಸಗಿ ಕೊಠಡಿಗೆ ಆಗಾಗ್ಗೆ ಹೋಗುತ್ತಿದ್ದಳು.
ಈ ವೇಳೆ ವೈದ್ಯರಿಗೆ ತಿಳಿಯದಂತೆ ಅವರ ಖಾಸಗಿ ಫೋಟೋಗಳನ್ನು ಮೊಬೈಲ್‌ನಲ್ಲಿ ಗುಪ್ತವಾಗಿ ಸೆರೆಹಿಡಿದಿದ್ದಳು. ಬಳಿಕ ಆ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುತ್ತೇನೆ, ಅತ್ಯಾಚಾರ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸುತ್ತೇನೆ, ಕೊಲೆ ಮಾಡಿಸುತ್ತೇನೆ ಎಂದು ಬೆದರಿಕೆ ಹಾಕಲು ಆರಂಭಿಸಿದ್ದಳು. ಸಮಾಜದಲ್ಲಿ ಮಾನಹಾನಿಯಾಗುವ ಭಯದಿಂದ ವೈದ್ಯರು ಆಕೆ ಕೇಳಿದಾಗಲೆಲ್ಲ ಲಕ್ಷಾಂತರ ರೂಪಾಯಿ ನೀಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
24 ಗಂಟೆ ನಿಗಾ; ವಿಶೇಷ ಮೊಬೈಲ್ ನೀಡಿ ಕಣ್ಗಾವಲು
ತಿಂಗಳಿಗೆ ಕೇವಲ ₹12,000 ಸಂಬಳ ಪಡೆಯುತ್ತಿದ್ದ ನರ್ಸ್, ವೈದ್ಯರನ್ನು ಸಂಪೂರ್ಣ ತನ್ನ ನಿಯಂತ್ರಣದಲ್ಲಿಟ್ಟಿದ್ದಳು ಎನ್ನಲಾಗಿದೆ. ಅವರಿಗಾಗಿ ಪ್ರತ್ಯೇಕ ಮೊಬೈಲ್ ಹಾಗೂ ಸಿಮ್ ಕಾರ್ಡ್ ನೀಡಿ, ಅದನ್ನು 24 ಗಂಟೆಯೂ ಆನ್ ಇಡಬೇಕು ಎಂದು ಸೂಚಿಸಿದ್ದಳು.
ಇದಲ್ಲದೆ, ಆಸ್ಪತ್ರೆಯ ಸಿಸಿಟಿವಿ ಕ್ಯಾಮೆರಾಗಳ ಪಾಸ್‌ವರ್ಡ್‌ಗಳನ್ನೂ ತಿಳಿದುಕೊಂಡು ವೈದ್ಯರ ಪ್ರತಿಯೊಂದು ಚಲನವಲನದ ಮೇಲೂ ನಿಗಾ ಇಟ್ಟಿದ್ದಳು. ಒಂದು ಬಾರಿ ವೈದ್ಯರು ಕೆಲಸದ ನಿಮಿತ್ತ ಅಹಮದಾಬಾದ್‌ಗೆ ತೆರಳಿದ್ದಾಗ, ಆಕೆ ಸುಮಾರು 1,000 ಬಾರಿ ಕರೆ ಮಾಡಿ ಕಿರುಕುಳ ನೀಡಿದ್ದಾಳೆ. ವೈದ್ಯರು ಕರೆ ಸ್ವೀಕರಿಸದಿದ್ದಾಗ, ಅವರ ಖಾಸಗಿ ಫೋಟೋಗಳನ್ನು ಆಸ್ಪತ್ರೆ ಸಿಬ್ಬಂದಿಗೆ ತೋರಿಸಿ ಬ್ಲ್ಯಾಕ್‌ಮೇಲ್ ಮಾಡಿದ್ದಾಳೆ. ಅಲ್ಲದೆ, ಖಾಲಿ ಚೆಕ್‌ಗಳು ಹಾಗೂ ಸ್ಟಾಂಪ್ ಪೇಪರ್‌ಗಳ ಮೇಲೆ ಬಲವಂತವಾಗಿ ಸಹಿ ಮಾಡಿಸಿಕೊಂಡು ಬ್ಯಾಂಕ್ ಲಾಕರ್‌ನಲ್ಲಿ ಇಟ್ಟುಕೊಂಡಿದ್ದಳು ಎಂದು ಆರೋಪಿಸಲಾಗಿದೆ.
ಪೊಲೀಸರಿಗೆ ದೂರು; ನರ್ಸ್ ಬಂಧನ
ಮಾನಸಿಕ ಕಿರುಕುಳ ತಾಳಲಾರದೆ ಕೊನೆಗೆ ವೈದ್ಯರು ಪೊಲೀಸರ ಮೊರೆ ಹೋಗಿದ್ದಾರೆ. ತಮ್ಮ ವೈಯಕ್ತಿಕ ಹಾಗೂ ಆಸ್ಪತ್ರೆಯ ಬ್ಯಾಂಕ್ ಖಾತೆಗಳಿಂದ ಒಟ್ಟು ಸುಮಾರು ₹2 ಕೋಟಿ ಹಣವನ್ನು ಆರೋಪಿತೆಗೆ ವರ್ಗಾಯಿಸಿದ್ದಾಗಿ ಅವರು ದೂರಿನಲ್ಲಿ ತಿಳಿಸಿದ್ದಾರೆ.
ದೂರಿನ ಆಧಾರದ ಮೇಲೆ ಬಾರ್ಮೇರ್ ಹೆಚ್ಚುವರಿ ಪೊಲೀಸ್ ಅಧೀಕ್ಷಕ ನಿತೇಶ್ ಆರ್ಯ ಅವರ ನೇತೃತ್ವದಲ್ಲಿ ಪೊಲೀಸರು ನರ್ಸ್‌ನ್ನು ಬಂಧಿಸಿದ್ದು, ಆಕೆಯ ಬಳಿಯಿಂದ ₹17,000 ನಗದು ವಶಪಡಿಸಿಕೊಂಡಿದ್ದಾರೆ. ಆದರೆ, ತನ್ನ ವಿರುದ್ಧದ ಎಲ್ಲ ಆರೋಪಗಳನ್ನು ನರ್ಸ್ ತಳ್ಳಿಹಾಕಿದ್ದು, ವೈದ್ಯರು ತಮ್ಮನ್ನು ರಕ್ಷಿಸಿಕೊಳ್ಳಲು ಸುಳ್ಳು ಪ್ರಕರಣ ದಾಖಲಿಸಿದ್ದಾರೆ ಎಂದು ಹೇಳಿದ್ದಾಳೆ. ಇಬ್ಬರ ನಡುವಿನ ಸಂಬಂಧ ಹಾಗೂ ಬ್ಲ್ಯಾಕ್‌ಮೇಲ್ ಜಾಲದ ಕುರಿತು ಪೊಲೀಸರು ಸವಿಸ್ತಾರ ತನಿಖೆ ನಡೆಸುತ್ತಿದ್ದಾರೆ.

