ಮನೆಯಿಂದ ಕಾಲಿಡದೆ ಮನೆಯಿಂದಲೇ ಮಹಿಳೆಯರು ಕೆಲವು ಉದ್ಯಮಗಳನ್ನು ಆರಂಭಿಸಬಹುದು. ಇವುಗಳ ಮೂಲಕ ಸ್ವಾವಲಂಬಿಗಳಾಗಿ ಆರ್ಥಿಕವಾಗಿ ಬೆಳೆಯಬಹುದು. ಮನೆಯಲ್ಲಿಯೇ ಬಿಡುವಿನ ಸಮಯದಲ್ಲಿ ಯಾವುದಾದರೂ ಉದ್ಯಮ ಮಾಡಿ ಹಣ ಸಂಪಾದಿಸಬೇಕು ಎಂದು ಅನೇಕ ಮಹಿಳೆಯರು ಬಯಸುತ್ತಾರೆ. ಅಂತಹವರಿಗೆ ಹಲವಾರು ಉತ್ತಮ ಆಯ್ಕೆಗಳಿವೆ.
ಮನೆ ಮತ್ತು ಕುಟುಂಬದ ಜವಾಬ್ದಾರಿಗಳ ನಡುವೆ ಹೊರಗೆ ಹೋಗಿ ಕೆಲಸ ಮಾಡಲು ಸಮಯವಿಲ್ಲದ ಗೃಹಿಣಿಯರು, ಪತಿಯನ್ನೇ ಅವಲಂಬಿಸದೆ ಆರ್ಥಿಕವಾಗಿ ಸ್ವತಂತ್ರರಾಗಲು ಬಯಸುತ್ತಾರೆ. ಇಂತಹ ಮಹಿಳೆಯರು ಮನೆಯಿಂದಲೇ ಆದಾಯ ಗಳಿಸುವ ಮಾರ್ಗಗಳನ್ನು ಹುಡುಕುತ್ತಿರುತ್ತಾರೆ. ಕೆಲವರು ವರ್ಕ್ ಫ್ರಮ್ ಹೋಮ್ ಅಥವಾ ಪಾರ್ಟ್ಟೈಮ್ ಉದ್ಯೋಗಗಳಿಗಾಗಿ ಹುಡುಕಿದರೆ, ಇನ್ನು ಕೆಲವರು ಮನೆಯಲ್ಲಿಯೇ ಸಣ್ಣ ಉದ್ಯಮ ಆರಂಭಿಸಲು ಆಸಕ್ತಿ ತೋರುತ್ತಾರೆ. ಕಡಿಮೆ ಖರ್ಚಿನಲ್ಲಿ ಮನೆಯಿಂದಲೇ ಸ್ವಯಂ ಉದ್ಯೋಗ ಆರಂಭಿಸಲು ಬಯಸುವ ಮಹಿಳೆಯರಿಗೆ ಹಲವು ಅವಕಾಶಗಳಿವೆ. ಅಂತಹ ಐದು ಉದ್ಯಮಗಳ ಮಾಹಿತಿ ಇಲ್ಲಿದೆ.
1. ಕ್ಯಾಟರಿಂಗ್ ಉದ್ಯಮ
ಮಹಿಳೆಯರಿಗೆ ಅಡುಗೆಯಲ್ಲಿ ಉತ್ತಮ ಅನುಭವವಿದ್ದರೆ ಮನೆಯಲ್ಲಿಯೇ ಕ್ಯಾಟರಿಂಗ್ ಉದ್ಯಮ ಆರಂಭಿಸಬಹುದು. ಕಚೇರಿಗಳಿಗೆ ತೆರಳುವ ಉದ್ಯೋಗಿಗಳಿಗೆ ಟಿಫಿನ್ ಮತ್ತು ಊಟದ ಬಾಕ್ಸ್ಗಳನ್ನು ಪೂರೈಸುವ ಮೂಲಕ ಆದಾಯ ಗಳಿಸಬಹುದು.
ಈ ಉದ್ಯಮ ಆರಂಭಿಸಲು ಹೆಚ್ಚಿನ ಬಂಡವಾಳದ ಅಗತ್ಯವಿಲ್ಲ. ಮನೆಯ ಅಡುಗೆಮನೆಯಲ್ಲಿಯೇ ಆಹಾರ ತಯಾರಿಸಿ ಗ್ರಾಹಕರಿಗೆ ತಲುಪಿಸಬಹುದು. ಆನ್ಲೈನ್ ವೇದಿಕೆಗಳು ಮತ್ತು ವಾಟ್ಸ್ಆ್ಯಪ್ ಮಾರ್ಕೆಟಿಂಗ್ ಮೂಲಕ ಗ್ರಾಹಕರನ್ನು ಹೆಚ್ಚಿಸಿಕೊಳ್ಳಬಹುದು.
2. ಆನ್ಲೈನ್ ತರಗತಿಗಳು
ಶಿಕ್ಷಣದ ಹಿನ್ನೆಲೆ ಹೊಂದಿರುವ ಮಹಿಳೆಯರು ಮಕ್ಕಳಿಗೆ ಆನ್ಲೈನ್ ತರಗತಿಗಳನ್ನು ನಡೆಸುವ ಮೂಲಕ ಮನೆಯಲ್ಲಿಯೇ ಆದಾಯ ಗಳಿಸಬಹುದು.
ಪ್ರಸ್ತುತ ಹಲವು ಟ್ಯೂಷನ್ ವೆಬ್ಸೈಟ್ಗಳು ಮತ್ತು ಆ್ಯಪ್ಗಳು ಲಭ್ಯವಿವೆ. ಇವುಗಳಲ್ಲಿ ನೋಂದಾಯಿಸಿಕೊಂಡು ಆನ್ಲೈನ್ ತರಗತಿಗಳು ಹಾಗೂ ಟ್ಯೂಷನ್ಗಳನ್ನು ನಡೆಸಬಹುದು. ಇದಕ್ಕೆ ಹೆಚ್ಚಿನ ಹೂಡಿಕೆಯ ಅಗತ್ಯವಿಲ್ಲ. ಸ್ವಂತವಾಗಿ ಮನೆಯಲ್ಲಿಯೇ ಟ್ಯೂಷನ್ ಕೇಂದ್ರವನ್ನೂ ಆರಂಭಿಸಬಹುದು.
3. ಹೋಮ್ ಬ್ಯೂಟಿ ಸೇವೆಗಳು
ಬ್ಯೂಟಿಷಿಯನ್ ಕೋರ್ಸ್ ಪೂರ್ಣಗೊಳಿಸಿರುವ ಅಥವಾ ಸೌಂದರ್ಯ ಸೇವೆಗಳಲ್ಲಿ ಅನುಭವ ಹೊಂದಿರುವ ಮಹಿಳೆಯರು ಮನೆಯಲ್ಲಿಯೇ ಒಂದು ಕೊಠಡಿಯಲ್ಲಿ ಬ್ಯೂಟಿ ಪಾರ್ಲರ್ ಆರಂಭಿಸಬಹುದು.
ಇದಕ್ಕೆ ಅಂದಾಜು ₹20,000 ವರೆಗೆ ವೆಚ್ಚವಾಗಬಹುದು. ಮೇಕಪ್, ಹೇರ್ಸ್ಟೈಲಿಂಗ್ ಮತ್ತು ಗ್ರೂಮಿಂಗ್ ಸೇವೆಗಳನ್ನು ಒದಗಿಸುವ ಮೂಲಕ ಆದಾಯ ಗಳಿಸುವ ಅವಕಾಶವಿದೆ. ಗ್ರಾಹಕರ ಸಂಖ್ಯೆ ಹೆಚ್ಚಾದಂತೆ ಸೇವೆಗಳ ವ್ಯಾಪ್ತಿಯನ್ನೂ ವಿಸ್ತರಿಸಬಹುದು.
4. ಟೈಲರಿಂಗ್ ಉದ್ಯಮ
ಹೊಲಿಗೆ ಕೆಲಸ ತಿಳಿದಿರುವ ಮಹಿಳೆಯರು ಮನೆಯಲ್ಲಿಯೇ ಟೈಲರಿಂಗ್ ಉದ್ಯಮ ಆರಂಭಿಸಬಹುದು. ಸ್ಥಳೀಯ ಗ್ರಾಹಕರಿಗೆ ಬಟ್ಟೆ ಹೊಲಿಯುವುದು, ಬಟ್ಟೆಗಳ ಅಳತೆ ಬದಲಾಯಿಸುವುದು ಮತ್ತು ಸಾಂಪ್ರದಾಯಿಕ ಉಡುಪುಗಳನ್ನು ಸಿದ್ಧಪಡಿಸುವಂತಹ ಸೇವೆಗಳನ್ನು ನೀಡಬಹುದು.
ಕೆಲವು ಸರ್ಕಾರಿ ಸಂಸ್ಥೆಗಳು ಮತ್ತು ಸ್ವಯಂಸೇವಾ ಸಂಸ್ಥೆಗಳು ಮಹಿಳೆಯರಿಗೆ ಉಚಿತವಾಗಿ ಹೊಲಿಗೆ ತರಬೇತಿ ನೀಡುತ್ತವೆ. ಇಂತಹ ತರಬೇತಿ ಪಡೆದು ಮನೆಯಿಂದಲೇ ಉದ್ಯಮ ಆರಂಭಿಸಬಹುದು. ಇದರಿಂದ ಮನೆಯ ಜವಾಬ್ದಾರಿಗಳನ್ನು ನಿರ್ವಹಿಸುತ್ತಲೇ ಆದಾಯ ಗಳಿಸಲು ಸಾಧ್ಯವಾಗುತ್ತದೆ.
5. ತಿಂಡಿ-ತಿನಿಸುಗಳ ಉದ್ಯಮ
ಅಡುಗೆಯಲ್ಲಿ ಆಸಕ್ತಿ ಹೊಂದಿರುವ ಮಹಿಳೆಯರು ಮನೆಯಲ್ಲಿಯೇ ವಿವಿಧ ಬಗೆಯ ತಿಂಡಿ-ತಿನಿಸುಗಳನ್ನು ತಯಾರಿಸಿ ಮಾರಾಟ ಮಾಡಬಹುದು. ಇವುಗಳನ್ನು ಇ-ಕಾಮರ್ಸ್ ವೇದಿಕೆಗಳ ಮೂಲಕವೂ ಗ್ರಾಹಕರಿಗೆ ತಲುಪಿಸಬಹುದು.
ಈ ಉದ್ಯಮವನ್ನು ಆರಂಭಿಸಲು ಸುಮಾರು ₹10,000 ವೆಚ್ಚವಾಗಬಹುದು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಗ್ರಾಹಕರ ಸಂಖ್ಯೆ ಹೆಚ್ಚಾದಂತೆ ಉದ್ಯಮವನ್ನು ವಿಸ್ತರಿಸಿಕೊಳ್ಳಬಹುದು. ವಾಟ್ಸ್ಆ್ಯಪ್ ಮತ್ತು ಡಿಜಿಟಲ್ ಮಾರ್ಕೆಟಿಂಗ್ ಮೂಲಕ ಹೆಚ್ಚಿನ ಗ್ರಾಹಕರನ್ನು ತಲುಪಬಹುದು.
ಒಟ್ಟಿನಲ್ಲಿ ಮನೆಯಿಂದ ಹೊರಗೆ ಹೋಗಲು ಸಾಧ್ಯವಾಗದ ಮಹಿಳೆಯರೂ ತಮ್ಮ ಕೌಶಲ್ಯ ಮತ್ತು ಆಸಕ್ತಿಗೆ ತಕ್ಕಂತೆ ಕ್ಯಾಟರಿಂಗ್, ಆನ್ಲೈನ್ ಟ್ಯೂಷನ್, ಬ್ಯೂಟಿ ಸೇವೆಗಳು, ಟೈಲರಿಂಗ್ ಹಾಗೂ ತಿಂಡಿ-ತಿನಿಸುಗಳ ಉದ್ಯಮಗಳನ್ನು ಆರಂಭಿಸಬಹುದು. ಸೂಕ್ತ ಯೋಜನೆ, ಗುಣಮಟ್ಟದ ಸೇವೆ ಮತ್ತು ಗ್ರಾಹಕರ ವಿಶ್ವಾಸದ ಮೂಲಕ ಸ್ವಾವಲಂಬಿ ಬದುಕಿನತ್ತ ಹೆಜ್ಜೆ ಇಡಬಹುದು.

