ಬೆಂಗಳೂರು: ರಾಜ್ಯ ಕಾಂಗ್ರೆಸ್ ನಲ್ಲಿ ಹಲವು ದಿನಗಳಿಂದ ಭಾರಿ ಚರ್ಚೆಗೆ ಕಾರಣವಾಗಿದ್ದ ಮುಖ್ಯಮಂತ್ರಿ ಬದಲಾವಣೆಯಹಗ್ಗಜಗ್ಗಾಟಕ್ಕೆ ಕೊನೆಗೂ ತೆರೆ ಬಿದ್ದಿದೆ. ಹೈಕಮಾಂಡ್ ಸೂಚನೆ ಮೇರೆಗೆ ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ನಿರೀಕ್ಷೆಯಂತೆ ಡಿ.ಕೆ.ಶಿವಕುಮಾರ್ ನೂತನ ಸಿಎಂ ಆಗಿ ಅಧಿಕಾರ ಸ್ವೀಕರಿಸುವುದು ಖಚಿತವಾಗಿದೆ. ಇದರ ಬೆನ್ನಲ್ಲೇ ಇದೀಗ ನೂತನ ಸಚಿವ ಸಂಪುಟ ರಚನೆ ಹಾಗೂ ಉಪಮುಖ್ಯಮಂತ್ರಿ ಹುದ್ದೆಗಳ ಸೃಷ್ಟಿಯ ವಿಚಾರ ಹೈಕಮಾಂಡ್‌ಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ರಾಜ್ಯದಲ್ಲಿ ಆಡಳಿತ ಸಮತೋಲನ ಕಾಯ್ದುಕೊಳ್ಳಲು ಹಾಗೂ ಮುಂಬರುವ ಲೋಕಸಭಾ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಬರೋಬ್ಬರಿ 4 ಡಿಸಿಎಂ ಹುದ್ದೆಗಳನ್ನು ಸೃಷ್ಟಿಸಲು ಎಐಸಿಸಿ ಚಿಂತನೆ ನಡೆಸಿದೆ. ಆದರೆ, ಪ್ರಮುಖ ಸಮುದಾಯಗಳ ಪ್ರಭಾವಿ ನಾಯಕರುಗಳು ಡಿಸಿಎಂ ಹುದ್ದೆಗಾಗಿ ದೆಹಲಿ ಮಟ್ಟದಲ್ಲಿ ತೀವ್ರ ಲಾಬಿ ನಡೆಸುತ್ತಿರುವುದರಿಂದ, ಯಾರಿಗೆ ಸ್ಥಾನ ನೀಡಿದರೂ ಅಸಮಾಧಾನ ಸ್ಫೋಟಗೊಳ್ಳುವ ಭೀತಿ ಎದುರಾಗಿದೆ. ಹಾಗಾಗಿ ಹೈಕಮಾಂಡ್ ನಾಯಕರು ಸಂದಿಗ್ಧ ಸ್ಥಿತಿಗೆ ಸಿಲುಕಿದ್ದಾರೆ.
ಒಬಿಸಿ, ಲಿಂಗಾಯತ, ಮುಸ್ಲಿಂ ಹಾಗೂ ದಲಿತ ಸಮುದಾಯಗಳಿಗೆ ತಲಾ ಒಂದು ಡಿಸಿಎಂ ಹುದ್ದೆ ನೀಡಲು ಹೈಕಮಾಂಡ್ ಯೋಚಿಸಿತ್ತು. ಆದರೆ ಪ್ರತಿಯೊಂದು ಕೋಟಾದಲ್ಲೂ ನಾಯಕರ ನಡುವೆ ಪೈಪೋಟಿ ಶುರುವಾಗಿದೆ.
ಒಬಿಸಿ ಕೋಟಾದಡಿ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯ ಅವರಿಗೆ ಸ್ಥಾನ ನೀಡಲು ಆಲೋಚಿಸಲಾಗಿದೆ. ಆದರೆ, ಇವರಿಗೆ ನೀಡಿದರೆ ಪಕ್ಷದಲ್ಲಿ ಭಿನ್ನ ಸಂದೇಶ ರವಾನೆಯಾಗಬಹುದು ಎಂಬ ಆತಂಕ ಶುರುವಾಗಿದೆ.
ಲಿಂಗಾಯತ ಕೋಟಾಡಡಿ ಹಿರಿಯ ನಾಯಕರಾದ ಎಂ.ಬಿ. ಪಾಟೀಲ್ ಮತ್ತು ಈಶ್ವರ ಖಂಡ್ರೆ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಮುಸ್ಲಿಂ ಕೋಟಾದಡಿ ಸಚಿವ ಜಮೀರ್ ಅಹ್ಮದ್ ಖಾನ್ ಅವರಿಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಬೆಂಬಲವಿದ್ದರೆ, ಮತ್ತೊಂದೆಡೆ ಸ್ಪೀಕರ್ ಯು.ಟಿ. ಖಾದರ್ ಅವರಿಗೆ ಕೇರಳದ ಪ್ರಭಾವಿ ಧಾರ್ಮಿಕ ಗುರುಗಳ ಬೆಂಬಲವಿದ್ದು, ಇಬ್ಬರ ನಡುವೆ ಭಾರಿ ಪೈಪೋಟಿ ನಡೆದಿದೆ.
ದಲಿತ ಕೋಟಾದಲ್ಲಿ ಹಿರಿಯ ನಾಯಕ ಡಾ. ಜಿ. ಪರಮೇಶ್ವರ್ ಮತ್ತು ಪ್ರಿಯಾಂಕ್ ಖರ್ಗೆ ನಡುವೆ ಜಟಾಪಟಿ ಆರಂಭವಾಗಿದೆ. ಯುವ ನಾಯಕ ಪ್ರಿಯಾಂಕ್ ಖರ್ಗೆಗೆ ಸ್ಥಾನ ನೀಡಿದರೆ ಪರಮೇಶ್ವರ್ ಅಸಮಾಧಾನಗೊಳ್ಳುವ ಸಾಧ್ಯತೆಯಿದೆ. ಅಲ್ಲದೆ ದಲಿತ ಸಮುದಾಯದಲ್ಲಿ ಎಡಗೈ ಮತ್ತು ಬಲಗೈ ಪಂಗಡಗಳ ಸಮೀಕರಣದ ಪ್ರಶ್ನೆಯೂ ಉದ್ಭವಿಸಿದೆ. ಹೀಗಾಗಿ ಇಂದು ನಡೆಯಲಿರುವ ಶಾಸಕಾಂಗ ಪಕ್ಷದ ಸಭೆಯ ಬಳಿಕವೇ ಮತ್ತೊಮ್ಮೆ ಪರುಶೀಲಿಸಿ ಹೈಕಮಾಂಡ್ ಅಂತಿಮ ನಿರ್ಧಾರ ಪ್ರಕಟಿಸಲಿದೆ ಎನ್ನಲಾಗಿದೆ.
ಇನ್ನೊಂದೆಡೆ, ತೆರವಾಗಲಿರುವ ಕೆಪಿಸಿಸಿ ಅಧ್ಯಕ್ಷ ಸ್ಥಾನದ ರೇಸ್‌ನಲ್ಲಿ ಬಿ.ಕೆ.ಹರಿಪ್ರಸಾದ್ ಎಂಟ್ರಿ ಕೊಟ್ಟಿರುವುದು ರಾಜಕೀಯವಾಗಿ ಭಾರಿ ಸಂಚಲನ ಸೃಷ್ಟಿಸಿದೆ. ಈ ಮುಂಚೆ ಸತೀಶ್ ಜಾರಕಿಹೊಳಿ ಅವರ ಹೆಸರು ಮುಂಚೂಣಿಯಲ್ಲಿದ್ದರೂ, ಅವರು ಸಂಪುಟದಲ್ಲಿ ಸಚಿವ ಸ್ಥಾನದ ಜೊತೆಗೇ ಅಧ್ಯಕ್ಷ ಸ್ಥಾನ ಬೇಕು ಎಂದು ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ. ಅಧಿಕಾರವಿಲ್ಲದ ಬರಿ ಅಧ್ಯಕ್ಷ ಸ್ಥಾನ ಒಪ್ಪಲು ಅವರು ನಿರಾಕರಿಸಿದ್ದಾರೆ. ಈ ಬೆಳವಣಿಗೆಯ ಬೆನ್ನಲ್ಲೇ ಒಬಿಸಿ ಕೋಟಾದಡಿ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಅವರ ಹೆಸರು ಅನಿರೀಕ್ಷಿತವಾಗಿ ಮುನ್ನೆಲೆಗೆ ಬಂದಿದೆ. ಹರಿಪ್ರಸಾದ್ ಅವರಿಗೆ ಕೆ.ಸಿ. ವೇಣುಗೋಪಾಲ್ ಅವರ ಸಂಪೂರ್ಣ ಬೆಂಬಲವಿದ್ದು, ಹೈಕಮಾಂಡ್ ಎದುರು ಅವರ ಹೆಸರನ್ನು ಪ್ರಸ್ತಾಪಿಸಲಾಗಿದೆ.
ಇಂದು ಸಂಜೆ ನಡೆಯಲಿರುವ ಶಾಸಕಾಂಗ ಪಾಕ್ಷದ ಸಭೆಯಲ್ಲಿ ಹಿರಿಯ ಶಾಸಕರ ಮೂಲಕ ಬಿ.ಕೆ. ಹರಿಪ್ರಸಾದ್ ಅವರ ಹೆಸರನ್ನು ಅಧಿಕೃತವಾಗಿ ಪ್ರಸ್ತಾಪಿಸಲು ಹೈಕಮಾಂಡ್ ನಾಯಕರು ತಂತ್ರ ರೂಪಿಸಿದ್ದಾರೆ ಎನ್ನಲಾಗಿದೆ.

