ನಗರಗಳಲ್ಲಿ ಕಾರು ಪಾರ್ಕಿಂಗ್ ಮಾಡುವುದು ಎಷ್ಟು ದೊಡ್ಡ ತಲೆನೋವು ಎಂಬುದು ನಮಗೆಲ್ಲ ಗೊತ್ತಿದೆ. ಇದೇ ಸಮಸ್ಯೆಯನ್ನು ಬಿಸಿನೆಸ್ ಆಗಿ ಬದಲಿಸಿ ಯಶಸ್ವಿಯಾದವರು ದಾವಣಗೆರೆಯ ಗುರುಮೂರ್ತಿ. ಅವರ ಕಂಪನಿಯ ಹೆಸರು ಗುಪಿಯೋ (Gupio).ಬೆಂಗಳೂರಿನ ಟೆಕ್ ಪಾರ್ಕ್ಗಳ ಮುಂದೆ ಓಡಾಡುವಾಗ ನೂರಾರು ಕಾರುಗಳು ಪಾರ್ಕಿಂಗ್ ಜಾಗವಿಲ್ಲದೆ ಸಾಲಾಗಿ ನಿಂತಿರುವುದನ್ನು ನೀವು ನೋಡಿರುತ್ತೀರಿ.
ಈ ಪಾರ್ಕಿಂಗ್ ಕಿರಿಕಿರಿಯನ್ನೇ ಒಂದು ದೊಡ್ಡ ಬಿಸಿನೆಸ್ ಐಡಿಯಾವನ್ನಾಗಿ ಬದಲಿಸಿದವರು ನಮ್ಮ ದಾವಣಗೆರೆಯ ಗುರುಮೂರ್ತಿ ಸಿ. ಇಂದು ಅವರ ಗುಪಿಯೋ (Gupio) ಸಂಸ್ಥೆ ದೇಶದ ದೊಡ್ಡ ದೊಡ್ಡ ಕಾರ್ಪೊರೇಟ್ ಕಂಪನಿಗಳ ಪಾರ್ಕಿಂಗ್ ಸಮಸ್ಯೆಗೆ ಸ್ಮಾರ್ಟ್ ಪರಿಹಾರ ನೀಡುತ್ತಿದೆ.
ಟೋಲ್ ಪ್ಲಾಜಾದಿಂದ ಶುರುವಾದ ಪಯಣ
ಬಡತನದ ಬಾಲ್ಯ: ದಾವಣಗೆರೆಯ ಹಳ್ಳಿಯೊಂದರಲ್ಲಿ ಬೆಳೆದ ಗುರುಮೂರ್ತಿ, ಹಣದ ಕಷ್ಟದಿಂದಾಗಿ ಪಿಯುಸಿ ನಂತರ ಓದು ನಿಲ್ಲಿಸಿದರು.
ಮೊದಲ ಕೆಲಸ: ಕೆಲಸ ಹುಡುಕಿ ಬೆಂಗಳೂರಿಗೆ ಬಂದ ಇವರು ಮೊದಲು ಟೋಲ್ ಗೇಟ್ನಲ್ಲಿ ಕೆಲಸ ಮಾಡಿದರು. ಆಗ ಅವರಿಗೆ ಸಿಗುತ್ತಿದ್ದ ಕೂಲಿ ದಿನಕ್ಕೆ ಬರಿ ₹250.
ಭಾಷೆಯ ಸಮಸ್ಯೆ: ಕನ್ನಡ ಮೀಡಿಯಂನಲ್ಲಿ ಓದಿದ್ದ ಅವರಿಗೆ ಇಂಗ್ಲಿಷ್ ಬರದೆ ಆರಂಭದಲ್ಲಿ ತುಂಬಾ ಕಷ್ಟಪಟ್ಟರು.
ಆದರೆ, ಸೋಲೊಪ್ಪಬಾರದು ಎಂಬ ಛಲ ಅವರಲ್ಲಿತ್ತು. ಕ್ರೋಮಾ ಮತ್ತು ವಿವೋ ಅಂತಹ ಸಂಸ್ಥೆಗಳಲ್ಲಿ ಸೇಲ್ಸ್ ಕೆಲಸ ಮಾಡುವಾಗ ಇಂಗ್ಲಿಷ್ ಕಲೆತರು, ಜನರ ಜೊತೆ ಮಾತನಾಡುವುದನ್ನು ರೂಢಿಸಿಕೊಂಡರು
ಪಾರ್ಕಿಂಗ್ ಸಮಸ್ಯೆಯಲ್ಲೇ ಕಂಡರು ಬಿಸಿನೆಸ್ ಮ್ಯಾಜಿಕ್
ರಿಲಯನ್ಸ್ ಜಿಯೋಮಾರ್ಟ್ನಂತಹ ದೊಡ್ಡ ಸಂಸ್ಥೆಗಳಲ್ಲಿ ಮ್ಯಾನೇಜರ್ ಆಗಿದ್ದರೂ, ಗುರುಮೂರ್ತಿ ಅವರಿಗೆ ಸ್ವಂತ ಉದ್ಯಮದ ಕನಸಿತ್ತು. ಟೆಕ್ ಪಾರ್ಕ್ಗಳಲ್ಲಿ ಕೆಲಸ ಮಾಡುವ ಸಾವಿರಾರು ಜನರಿಗೆ ತಮ್ಮ ವಾಹನ ನಿಲ್ಲಿಸಲು ಜಾಗವೇ ಸಿಗುತ್ತಿಲ್ಲ ಎಂಬ ಕಹಿ ಸತ್ಯ ಅವರಿಗೆ ಅರ್ಥವಾಯಿತು. ಶೇ. 90ರಷ್ಟು ಉದ್ಯೋಗಿಗಳಿಗೆ ಸರಿಯಾದ ಪಾರ್ಕಿಂಗ್ ಸೌಲಭ್ಯವಿಲ್ಲದ್ದನ್ನು ಕಂಡು ಅದಕ್ಕೆ ತಂತ್ರಜ್ಞಾನದ ಸ್ಪರ್ಶ ನೀಡಲು ಗುಪಿಯೋ ಆರಂಭಿಸಿದರು.ಜನವರಿ 2023 ರಲ್ಲಿ ತಮ್ಮ ಸುಸ್ಥಿರ ಕಾರ್ಪೊರೇಟ್ ವೃತ್ತಿಜೀವನಕ್ಕೆ ರಾಜೀನಾಮೆ ನೀಡಿ, ಸ್ವಂತ ಉದ್ಯಮ ಆರಂಭಿಸಲು ನಿರ್ಧರಿಸಿದರು.
ಗುಪಿಯೋ (Gupio) ನೀಡುವ 4 ಸ್ಮಾರ್ಟ್ ಪಾರ್ಕಿಂಗ್ ಪರಿಹಾರಗಳು:
ಸುರಕ್ಷಿತ ಪಾರ್ಕಿಂಗ್ ತಾಣ (Organized Space): ಕಚೇರಿಗಳ ಸುತ್ತಮುತ್ತಲಿರುವ ಪಾಳುಬಿದ್ದ ಅಥವಾ ಅಸಂಘಟಿತ ಖಾಲಿ ಜಾಗಗಳನ್ನು ಪತ್ತೆಹಚ್ಚಿ, ಅವುಗಳನ್ನು ಸಿಸಿಟಿವಿ ಮತ್ತು ಭದ್ರತೆಯುಳ್ಳ ಅತ್ಯಾಧುನಿಕ ಪಾರ್ಕಿಂಗ್ ಸ್ಥಳಗಳನ್ನಾಗಿ ಪರಿವರ್ತಿಸುತ್ತದೆ.
ಭರವಸೆಯ ವ್ಯಾಲೆಟ್ ಸೇವೆ (Trusted Valet): ನಿಮ್ಮ ವಾಹನವನ್ನು ಎಲ್ಲೆಂದರಲ್ಲಿ ರಸ್ತೆಬದಿಯಲ್ಲಿ ನಿಲ್ಲಿಸದೆ, ಹಿನ್ನೆಲೆ ಪರಿಶೀಲನೆ ನಡೆಸಿದ ನುರಿತ ಚಾಲಕರ ಮೂಲಕ ಸುರಕ್ಷಿತ ಕಾಂಪೌಂಡ್ನೊಳಗೆ ಪಾರ್ಕ್ ಮಾಡಲಾಗುತ್ತದೆ.
ಡಿಜಿಟಲ್ ಟೋಕನ್ ಆ್ಯಪ್ (Smart App): ಪೇಪರ್ ಟೋಕನ್ ಕಳೆದುಹೋಗುವ ಚಿಂತೆಯಿಲ್ಲ! ಮೊಬೈಲ್ ಆ್ಯಪ್ ಮೂಲಕವೇ ವಾಹನದ ಲೈವ್ ಲೋಕೇಶನ್ ನೋಡಬಹುದು ಮತ್ತು ಕೇವಲ ಒಂದು ಕ್ಲಿಕ್ನಲ್ಲಿ ನಿಮ್ಮ ಕಾರನ್ನು ವಾಪಸ್ ತರಿಸಿಕೊಳ್ಳಬಹುದು.
ಲಾಸ್ಟ್-ಮೈಲ್ ಶಟಲ್ (Shuttle Service): ಪಾರ್ಕಿಂಗ್ ಜಾಗವು ಕಚೇರಿಯಿಂದ ದೂರವಿದ್ದಲ್ಲಿ, ಉದ್ಯೋಗಿಗಳ ಸಮಯ ಉಳಿಸಲು ಮತ್ತು ಆರಾಮದಾಯಕ ಪ್ರಯಾಣಕ್ಕಾಗಿ ಪಾರ್ಕಿಂಗ್ ತಾಣದಿಂದ ಆಫೀಸ್ವರೆಗೆ ಮಿನಿ ಬಸ್ ಅಥವಾ ಶಟಲ್ ವ್ಯವಸ್ಥೆ ಒದಗಿಸಲಾಗುತ್ತದೆ.
₹10 ಲಕ್ಷದ ಉಳಿತಾಯ, ಇಂದು ದೇಶಾದ್ಯಂತ ಗುಪಿಯೋ ಹವಾ
ಯಾವುದೇ ದೊಡ್ಡ ಬಂಡವಾಳವಿಲ್ಲದೆ, ಕೇವಲ ತಮ್ಮ ಕಷ್ಟದ ದುಡಿಮೆಯಿಂದ ಉಳಿಸಿದ್ದ ₹10 ಲಕ್ಷ ಹಣದೊಂದಿಗೆ 2023ರಲ್ಲಿ ಗುರುಮೂರ್ತಿ ಈ ಸಾಹಸ ಆರಂಭಿಸಿದರು. ಆರಂಭದ ದಿನಗಳಲ್ಲಿ ಮಾರ್ಕೆಟಿಂಗ್, ಅಕೌಂಟ್ಸ್ ಮತ್ತು ಆಪರೇಷನ್ಸ್ ಹೀಗೆ ಪ್ರತಿಯೊಂದು ಕೆಲಸವನ್ನೂ ಒಬ್ಬರೇ ಬೆವರು ಸುರಿಸಿ ನಿಭಾಯಿಸಿದ್ದರು.
ಅಂದು ಒಬ್ಬಂಟಿಯಾಗಿ ಶುರುವಾದ ಇವರ ಪಯಣ, ಇಂದು ದೇಶದ ಪ್ರಮುಖ ನಗರಗಳಿಗೆ ವ್ಯಾಪಿಸಿ ‘ಪ್ಯಾನ್-ಇಂಡಿಯಾ’ ಮಟ್ಟಕ್ಕೆ ಬೆಳೆದು ನಿಂತಿದೆ. ಅಷ್ಟೇ ಅಲ್ಲ, ಇಂದು ನೂರಾರು ನಿರುದ್ಯೋಗಿಗಳಿಗೆ ಉದ್ಯೋಗ ನೀಡುವ ಮೂಲಕ ಗುರುಮೂರ್ತಿ ಅವರು ಯಶಸ್ವಿ ಉದ್ಯಮಿಯಾಗಿ ಹೊರಹೊಮ್ಮಿದ್ದಾರೆ.

