ಕುಡಿಯುವ ಚಟಕ್ಕೆ ದಾಸನಾಗಿದ್ದ 25 ವರ್ಷದ ಯುವಕನೊಬ್ಬ ತನ್ನ ತಂದೆಯನ್ನು ಕೊಡಲಿಯಿಂದ ಕಡಿದು ಕೊಲೆ ಮಾಡಿ, ಶವವನ್ನು ನೀರಿನ ಟ್ಯಾಂಕ್‌ಗೆ ಎಸೆದಿದ್ದಾನೆ. ನಂತರ ಬಿರಿಯಾನಿ ತಿಂದು ಮಲಗಲು ಮನೆಗೆ ಮರಳಿದ್ದಾನೆ.
ಛತ್ತೀಸ್‌ಗಢದ ಸುರ್ಗುಜಾ ಜಿಲ್ಲೆಯ ಅಂಬಿಕಾಪುರದಲ್ಲಿ ಸೋಮವಾರ ರಾತ್ರಿ ಈ ಭೀಕರ ಹತ್ಯೆ ನಡೆದಿದೆ. ಪ್ರಭಾತ್ ಕೆರ್ಕೆಟ್ಟಾ ಅಲಿಯಾಸ್ ಲೆಡಾ ಎಂದು ಗುರುತಿಸಲ್ಪಟ್ಟ ವ್ಯಕ್ತಿಯನ್ನು ಬಂಧಿಸಲಾಗಿದೆ. ಪ್ರಭಾತ್ ತಂದೆ ಪರಾಸ್ ಕೆರ್ಕೆಟ್ಟಾ(50) ಬಹೆರಾಪಾರದಲ್ಲಿರುವ ತಮ್ಮ ಮನೆಯಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದರು ಮತ್ತು 25 ವರ್ಷದ ಯುವಕ ಹತ್ತಿರದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಸೋಮವಾರ ರಾತ್ರಿ 11 ಗಂಟೆ ಸುಮಾರಿಗೆ, ಪ್ರಭಾತ್ ಕುಡಿದ ಮತ್ತಿನಲ್ಲಿ ತನ್ನ ತಂದೆಯ ಮನೆಗೆ ಹೋಗಿದ್ದ. ತನ್ನ ಮಗನ ಮದ್ಯಪಾನದ ಚಟಕ್ಕೆ ಪರಾಸ್ ಆಕ್ಷೇಪ ವ್ಯಕ್ತಪಡಿಸಿದ್ದು, ಇದು ತೀವ್ರ ವಾಗ್ವಾದಕ್ಕೆ ಕಾರಣವಾಯಿತು. ನಂತರ ಕೋಪಗೊಂಡ ಪ್ರಭಾತ್ ಮನೆಯೊಳಗೆ ಇಟ್ಟಿದ್ದ ಕೊಡಲಿಯನ್ನು ತೆಗೆದುಕೊಂಡು ತಂದೆಯ ತಲೆಗೆ ಹಲವು ಬಾರಿ ಹೊಡೆದಿದ್ದು, ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ತಂದೆ ಮೃತಪಟ್ಟಿದ್ದಾರೆ ಎಂದು ಖಚಿತಪಡಿಸಿಕೊಂಡ ನಂತರ, ಪ್ರಭಾತ್ ಶವವನ್ನು ಎಳೆದುಕೊಂಡು ಹೋಗಿ ಮನೆಯ ಸಮೀಪದ ಸಣ್ಣ ನೀರಿನ ಟ್ಯಾಂಕ್‌ನಲ್ಲಿ ಎಸೆದಿದ್ದಾನೆ. ನಂತರ ಹತ್ತಿರದ ಹೋಟೆಲ್ ಗೆ ನಡೆದುಕೊಂಡು ಹೋಗಿ ಬಿರಿಯಾನಿ ಆರ್ಡರ್ ಮಾಡಿ, ತಿಂದು, ನಂತರ ಮನೆಗೆ ಹಿಂತಿರುಗಿ ಮಲಗಿದ್ದಾನೆ.
ಮಂಗಳವಾರ ಬೆಳಿಗ್ಗೆ ಪರಾಸ್ ಕಾಣಿಸಲಿದ್ದಾಗ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸ್ ತಂಡ ಮನೆಗೆ ತಲುಪಿ ಪರಿಶೀಲಿಸಿದೆ. ನಂತರ ನೀರಿನ ಟ್ಯಾಂಕ್‌ನಿಂದ ಶವವನ್ನು ಹೊರತೆಗೆದಿದ್ದಾರೆ. ಮಣಿಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಅಪರಾಧ ನಡೆದಿದ್ದು, ಠಾಣಾಧಿಕಾರಿ ಸಿಪಿ ತಿವಾರಿ ಮಾತನಾಡಿ, “ಆರೋಪಿ ತನ್ನ ತಂದೆಯ ಮೇಲೆ ಹರಿತವಾದ ವಸ್ತುವಿನಿಂದ ಹಲ್ಲೆ ನಡೆಸಿ ತಲೆಗೆ ಮಾರಕ ಗಾಯಗಳನ್ನು ಉಂಟುಮಾಡಿದ್ದಾನೆ. ಶವವನ್ನು ನೀರಿನ ಟ್ಯಾಂಕ್‌ನಲ್ಲಿ ಎಸೆಯಲಾಗಿತ್ತು. ಆರೋಪಿಯನ್ನು ಬಂಧಿಸಲಾಗಿದ್ದು, ತನಿಖೆ ನಡೆಯುತ್ತಿದೆ” ಎಂದು ಹೇಳಿದ್ದಾರೆ.

