ತುಮಕೂರಿನಲ್ಲಿ ದಿನಾಂಕ: 24-04-2026 ರಿಂದ 26-04-2026 ರಂದು ಮೂರು ದಿನಗಳ ಕಾಲ 20 ವರ್ಷ ಒಳಗಿನ(Under 20 Junior Athletic Federation competition )ಪುರುಷ ಮತ್ತು ಮಹಿಳಾ ಯುವ 24ನೇ ರಾಷ್ಟ್ರೀಯ ಅಥ್ಲೆಟಿಕ್ ಕ್ರೀಡಾಕೂಟ ಆಯೋಜಿಸಲಾಗುತ್ತಿದೆ.
ಯುವ ಕ್ರೀಡಾಪಟುಗಳ ಪ್ರತಿಭೆಯನ್ನು ಉತ್ತೇಜಿಸುವ ಉದ್ದೇಶದಿಂದ ನಡೆಯಲಿರುವ ಈ ಕ್ರೀಡಾಕೂಟದಲ್ಲಿ ಓಟ, ಜಿಗಿತ, ಎಸೆತ ಸೇರಿದಂತೆ ವಿವಿಧ ಅಥ್ಲೆಟಿಕ್ಸ್ ಸ್ಪರ್ಧೆಗಳು ನಡೆಯಲಿದ್ದು, ದೇಶದ ವಿವಿಧ ಭಾಗಗಳ ಕ್ರೀಡಾಪಟುಗಳು ಭಾಗವಹಿಸುವ ನಿರೀಕ್ಷೆಯಿದೆ.
ಈ ಕ್ರೀಡಾಕೂಟದ ಸಿದ್ಧತೆಗಳ ಅಂಗವಾಗಿ ಭಾರತ ಒಲಿಂಪಿಕ್ ಸಂಸ್ಥೆಯ ಅಧ್ಯಕ್ಷ ಸತ್ಯನಾರಾಯಣ ಅವರು ಮಹಾತ್ಮ ಗಾಂಧಿ ಕ್ರೀಡಾಂಗಣಕ್ಕೆ ಭೇಟಿ ನೀಡಿ ಕ್ರೀಡಾಂಗಣ ಹಾಗೂ ಸಂಬಂಧಿತ ಸೌಲಭ್ಯಗಳನ್ನು ಪರಿಶೀಲಿಸಿದರು. ಕ್ರೀಡಾಪಟುಗಳಿಗೆ ಅಗತ್ಯವಿರುವ ಮೂಲಭೂತ ಸೌಲಭ್ಯಗಳು, ವಸತಿ ವ್ಯವಸ್ಥೆ, ಭದ್ರತೆ ಹಾಗೂ ಸ್ಪರ್ಧೆಗಳ ನಿರ್ವಹಣೆಗೆ ಸಂಬಂಧಿಸಿದ ಕ್ರಮಗಳನ್ನು ಅವಲೋಕಿಸಿ, ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲು ಸಂಬಂಧಿತ ಅಧಿಕಾರಿಗಳ ಜೊತೆ ಚರ್ಚಿಸಲಾಯಿತು.ಈ ಕ್ರೀಡಾಕೂಟದಲ್ಲಿ ವಿಜೇತರಾದ ಕ್ರೀಡಾಪಟುಗಳು ವಿಶ್ವ ಅಥ್ಲೆಟಿಕ್ ಕ್ರೀಡಾಕೂಟಕ್ಕೆ ಅರ್ಹರಾಗುತ್ತಾರೆ ಎಂದು ತಿಳಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಶುಭಾ ಕಲ್ಯಾಣ್, ತುಮಕೂರು ಮಹಾನಗರ ಪಾಲಿಕೆ ಆಯುಕ್ತರಾದ ಶುಭ ಅವರು, ಜಿಲ್ಲಾ ಯುವಜನ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿಗಳಾದ ರೋಹಿತ್ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದು, ಅಗತ್ಯ ಸಿದ್ಧತೆಗಳ ಬಗ್ಗೆ ಮಾಹಿತಿ ನೀಡಿದರು.

