HomeKarnatakaಕರ್ನಾಟಕದ ಕೋರ್ಟ್‌ಗಳಲ್ಲಿ 22,61,280 ಪ್ರಕರಣ ಬಾಕಿ, ದೇಶದಲ್ಲಿ ಎಷ್ಟನೇ ಸ್ಥಾನ?

ಕರ್ನಾಟಕದ ಕೋರ್ಟ್‌ಗಳಲ್ಲಿ 22,61,280 ಪ್ರಕರಣ ಬಾಕಿ, ದೇಶದಲ್ಲಿ ಎಷ್ಟನೇ ಸ್ಥಾನ?

ಕರ್ನಾಟಕದ ಅಧೀನ ನ್ಯಾಯಾಲಯಗಳಲ್ಲಿ 22,61,280 ಪ್ರಕರಣಗಳು ಬಾಕಿ ಉಳಿದಿದ್ದು, ದೇಶದಲ್ಲೇ ಅತಿ ಹೆಚ್ಚು ಬಾಕಿ ಪ್ರಕರಣಗಳನ್ನು ಹೊಂದಿರುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ 6ನೇ ಸ್ಥಾನದಲ್ಲಿದೆ.

ಕರ್ನಾಟಕ ಹೈಕೋರ್ಟ್‌ನಲ್ಲಿ 3,31,468 ಪ್ರಕರಣಗಳು ವಿಚಾರಣೆಗೆ ಕಾಯುತ್ತಿದ್ದು, ಇದು ಭಾರತದ 7ನೇ ಅತಿ ಹೆಚ್ಚು ಪ್ರಕರಣ ಬಾಕಿ ಇರುವ ನ್ಯಾಯಾಲಯವಾಗಿದೆ.

ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ದಾವಣಗೆರೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಕೇಳಿದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಲೋಕಸಭೆಯಲ್ಲಿ ಉತ್ತರಿಸಿದ ಕೇಂದ್ರ ಕಾನೂನು ಮತ್ತು ನ್ಯಾಯ ಖಾತೆ ಸಚಿವ (ಸ್ವತಂತ್ರ ಉಸ್ತುವಾರಿ) ಅರ್ಜುನ್ ರಾಮ್ ಮೇಘವಾಲ್ ಈ ಕುರಿತು ಮಾಹಿತಿ ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪ್ರಕರಣಗಳ ವಿಲೇವಾರಿಯು ನ್ಯಾಯಾಂಗದ ವ್ಯಾಪ್ತಿಗೆ ಬರುತ್ತದೆ, ಆದರೆ ಶೀಘ್ರ ನ್ಯಾಯದಾನಕ್ಕೆ ಬೆಂಬಲ ನೀಡಲು ಸರ್ಕಾರ ಬದ್ಧವಾಗಿದೆ ಎಂದು ಅವರು ತಿಳಿಸಿದ್ದಾರೆ. ರಾಷ್ಟ್ರೀಯ ನ್ಯಾಯಾಂಗ ದತ್ತಾಂಶ ಗ್ರಿಡ್‌ನಿಂದ ಪಡೆದ ಹಾಗೂ ಮಾರ್ಚ್ 23ಕ್ಕೆ ಅನ್ವಯವಾಗುವ ಈ ಅಂಕಿಅಂಶಗಳ ಪ್ರಕಾರ ಈ ಮಾಹಿತಿಯನ್ನು ನೀಡಲಾಗಿದೆ.

ರಾಷ್ಟ್ರೀಯ ಮಟ್ಟದಲ್ಲಿ ಅಧೀನ ನ್ಯಾಯಾಲಯಗಳಲ್ಲಿ ಒಟ್ಟು 4.86 ಕೋಟಿಗೂ ಹೆಚ್ಚು ಪ್ರಕರಣಗಳು ಬಾಕಿ ಇವೆ. ದೇಶದ ಎಲ್ಲಾ ಹೈಕೋರ್ಟ್‌ಗಳಲ್ಲಿ ಒಟ್ಟು 63,95,572 ಮತ್ತು ಸುಪ್ರೀಂಕೋರ್ಟ್‌ನಲ್ಲಿ 92,782 ಪ್ರಕರಣಗಳು ಬಾಕಿ ಇವೆ.

ಯಾವ ರಾಜ್ಯದಲ್ಲಿ ಹೆಚ್ಚು ಪ್ರಕರಣ ಬಾಕಿ?; ಅಧೀನ ನ್ಯಾಯಾಲಯಗಳಲ್ಲಿ 1.19 ಕೋಟಿಗೂ ಹೆಚ್ಚು ಬಾಕಿ ಪ್ರಕರಣಗಳನ್ನು ಹೊಂದಿರುವ ಉತ್ತರ ಪ್ರದೇಶ ಎಲ್ಲಾ ರಾಜ್ಯಗಳಿಗಿಂತ ಮೊದಲ ಸ್ಥಾನದಲ್ಲಿದೆ.

ಮಹಾರಾಷ್ಟ್ರ (59.61 ಲಕ್ಷ ಪ್ರಕರಣಗಳು), ಪಶ್ಚಿಮ ಬಂಗಾಳ (39.22 ಲಕ್ಷ), ಬಿಹಾರ (37.09 ಲಕ್ಷ) ಮತ್ತು ರಾಜಸ್ಥಾನ (25.96 ಲಕ್ಷ) ರಾಜ್ಯಗಳು ಕರ್ನಾಟಕಕ್ಕಿಂತ ಹೆಚ್ಚಿನ ಬಾಕಿ ಪ್ರಕರಣಗಳನ್ನು ಹೊಂದಿವೆ.

ನ್ಯಾಯಾಂಗದಲ್ಲಿ ಡಿಜಿಟಲ್ ಬಳಕೆ ಬಗ್ಗೆ ಸಚಿವರು ಮಾತನಾಡಿದ್ದು, ಇ-ಕೋರ್ಟ್ಸ್ ಮಿಷನ್ ಮೋಡ್ ಯೋಜನೆಯ ಮೂರನೇ ಹಂತವನ್ನು ಸಚಿವರು ಉಲ್ಲೇಖಿಸಿದ್ದಾರೆ. ಯೋಜನೆಯಡಿ 660 ಕೋಟಿಗೂ ಹೆಚ್ಚು ನ್ಯಾಯಾಲಯದ ದಾಖಲೆಗಳ ಪುಟಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ ಎಂದು ವಿವರ ನೀಡಿದರು.

2,444 ಇ-ಸೇವಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಮತ್ತು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ 3.97 ಕೋಟಿಗೂ ಹೆಚ್ಚು ವಿಚಾರಣೆಗಳನ್ನು ನಡೆಸಲಾಗಿದೆ. ಸುಮಾರು 1.07 ಕೋಟಿ ಪ್ರಕರಣಗಳನ್ನು ಇ-ಫೈಲಿಂಗ್ ವೇದಿಕೆಯ ಮೂಲಕ ವಿದ್ಯುನ್ಮಾನವಾಗಿ ದಾಖಲಿಸಲಾಗಿದೆ ಎಂದು ಸಚಿವರು ತಿಳಿಸಿದರು.

ಕೋರ್ಟ್ ಕಲಾಪಗಳ ನೇರ ಪ್ರಸಾರವನ್ನು 11 ಹೈಕೋರ್ಟ್‌ಗಳಿಗೆ ವಿಸ್ತರಿಸಲಾಗಿದೆ. ಪ್ರಕರಣಗಳ ವಿಶ್ಲೇಷಣೆ ಮತ್ತು ಮುನ್ಸೂಚನೆಗಾಗಿ ಕೃತಕ ಬುದ್ಧಿಮತ್ತೆ ಮತ್ತು ಆಪ್ಟಿಕಲ್ ಕ್ಯಾರೆಕ್ಟರ್ ರೆಕಗ್ನಿಷನ್ ಉಪಕರಣಗಳನ್ನು ನಿಯೋಜಿಸಲು ಸರ್ಕಾರ ಯೋಜಿಸಿದೆ ಎಂದು ಮೇಘವಾಲ್ ಹೇಳಿದರು.

ನ್ಯಾಯಾಂಗ ನೇಮಕಾತಿಗಳ ಕುರಿತು ಮಾತನಾಡಿದ ಸಚಿವರು, ಮೇ 2014 ರಿಂದ ಫೆಬ್ರವರಿ 2026ರ ನಡುವೆ ಸುಪ್ರೀಂಕೋರ್ಟ್‌ಗೆ 72 ನ್ಯಾಯಮೂರ್ತಿಗಳನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದರು.

ಇದೇ ಅವಧಿಯಲ್ಲಿ ಹೈಕೋರ್ಟ್‌ಗಳಿಗೆ 1,164 ಹೊಸ ನ್ಯಾಯಮೂರ್ತಿಗಳನ್ನು ನೇಮಿಸಲಾಗಿದೆ ಮತ್ತು 820 ಹೆಚ್ಚುವರಿ ನ್ಯಾಯಮೂರ್ತಿಗಳನ್ನು ಕಾಯಂ ಮಾಡಲಾಗಿದೆ. ಹೈಕೋರ್ಟ್ ನ್ಯಾಯಮೂರ್ತಿಗಳ ಮಂಜೂರಾದ ಸಂಖ್ಯೆಯು 2014 ರಲ್ಲಿ 906 ಇತ್ತು, ಅದು ಈಗ 1,122ಕ್ಕೆ ಏರಿಕೆಯಾಗಿದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular