ನೆಲಮಂಗಲ: ಮನೆಯಲ್ಲಿ ಆಟವಾಡುತ್ತಿದ್ದ ಮಗು ಮೊದಲನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿರುವ ಘೋರ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ತೋಟದಗುಡ್ಡದಹಳ್ಳಿಯಲ್ಲಿ ನಡೆದಿದೆ.
2 ವರ್ಷದ ದೀಕ್ಷಿತ್ ಮೃತ ಮಗು. 24 ಗಂಟೆಗಳ ಕಾಲ ಕೋಮಾದಲ್ಲಿದ್ದ ದೀಕ್ಷಿತ್ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾನೆ. ಘಟನಾ ಸ್ಥಳಕ್ಕೆ ಮಾದನಾಯಕನಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ದಾಸರಹಳ್ಳಿಯ ನವೀನ್ ಕುಮಾರ್, ಕಾವ್ಯ ದಂಪತಿ ಮತ್ತು ಮಗು ದೀಕ್ಷಿತ್ ಎರಡು ದಿನಗಳ ಹಿಂದೆ ಸಂಬಂಧಿಕರ ಮನೆಗೆ ಬಂದಿದ್ದರು. ಈ ವೇಳೆ ಆಟವಾಡುತ್ತಿದ್ದಾಗ ಕಟ್ಟಡದ ಮೊದಲ ಮಹಡಿ ಮೆಟ್ಟಿಲು ಮೇಲಿಂದ ದೀಕ್ಷಿತ್ ಉರುಳಿಬಿದ್ದಿದ್ದ.
ಕೂಡಲೇ ಪೋಷಕರು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ. ಮರಣೋತ್ತರ ಪರೀಕ್ಷೆಗೆ ನೆಲಮಂಗಲ ಶವಾಗಾರಕ್ಕೆ ರವಾನಿಸಲಾಗಿದೆ. ಮಗುವನ್ನು ಕಳೆದುಕೊಂಡ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ.

