ಇಂದು ಭಾರತದ ರಸ್ತೆಗಳಲ್ಲಿ ಎಲೆಕ್ಟ್ರಿಕ್ ಕಾರುಗಳ ಹವಾ ಜೋರಾಗಿದೆ. ಟಾಟಾ, ಮಹೀಂದ್ರಾ ಸೇರಿದಂತೆ ಹಲವು ಕಂಪನಿಗಳು ಇವಿ ಕ್ಷೇತ್ರದಲ್ಲಿ ಪಾರುಪತ್ಯ ಮೆರೆಯುತ್ತಿವೆ. ಆದರೆ, ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಕ್ರಾಂತಿ ಈಗ ಆರಂಭವಾಗಿದ್ದಲ್ಲ. ಇಂದಿಗೆ ಸರಿ ಸುಮಾರು 32 ವರ್ಷಗಳ ಹಿಂದೆಯೇ ಅಂದರೆ 1993ರಲ್ಲಿಯೇ ದೇಶದ ಮೊದಲ ಎಲೆಕ್ಟ್ರಿಕ್ ಕಾರ್ ರಸ್ತೆಗಿಳಿದಿತ್ತು ಎಂಬುದು ಹಲವರಿಗೆ ತಿಳಿದಿಲ್ಲ. ಅಂದು ತಂತ್ರಜ್ಞಾನದಲ್ಲಿ ಜಗತ್ತಿಗಿಂತಲೂ ಒಂದು ಹೆಜ್ಜೆ ಮುಂದೆ ಯೋಚಿಸಿದ್ದ ಆ ಕಾರಿನ ರೋಚಕ ಇತಿಹಾಸ ಇಲ್ಲಿದೆ.
ಏನಿದು ಲವ್ ಬರ್ಡ್ ಕಥೆ?
1993ರ ಆಟೋ ಎಕ್ಸ್ಪೋದಲ್ಲಿ ಮೊದಲ ಬಾರಿಗೆ ‘ಲವ್ ಬರ್ಡ್’ (Love Bird) ಎಂಬ ಹೆಸರಿನ ಪುಟ್ಟ ಎಲೆಕ್ಟ್ರಿಕ್ ಕಾರನ್ನು ಪರಿಚಯಿಸಲಾಯಿತು. ತಮಿಳುನಾಡಿನ ‘ಎಡ್ಡಿ ಕರೆಂಟ್ ಕಂಟ್ರೋಲ್ಸ್’ ಎಂಬ ಸಂಸ್ಥೆಯು ಜಪಾನ್ನ ಯಸ್ಕಾವಾ ಎಲೆಕ್ಟ್ರಿಕ್ ಕಂಪನಿಯ ಸಹಯೋಗದೊಂದಿಗೆ ಈ ಕಾರನ್ನು ಸಿದ್ಧಪಡಿಸಿತ್ತು. ಆ ಕಾಲದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಕಾರುಗಳೇ ಅಧಿಪತ್ಯ ಸ್ಥಾಪಿಸಿದ್ದಾಗ, ವಿದ್ಯುತ್ ಮೂಲಕ ಓಡುವ ಕಾರನ್ನು ಪರಿಚಯಿಸಿದ್ದು ದೊಡ್ಡ ಸಾಹಸವೇ ಆಗಿತ್ತು.
ವೈಶಿಷ್ಟ್ಯಗಳೇನಿತ್ತು?
ಲವ್ ಬರ್ಡ್ ಕೇವಲ ಇಬ್ಬರು ಪ್ರಯಾಣಿಸಬಹುದಾದ (Two-seater) ಪುಟ್ಟ ಕಾರಾಗಿತ್ತು. ಒಂದು ಬಾರಿ ಪೂರ್ಣ ಪ್ರಮಾಣದಲ್ಲಿ ಚಾರ್ಜ್ ಮಾಡಿದರೆ ಈ ಕಾರ್ 60 ಕಿಲೋಮೀಟರ್ ದೂರ ಕ್ರಮಿಸುವ ಸಾಮರ್ಥ್ಯ ಹೊಂದಿತ್ತು. ಬ್ಯಾಟರಿ ಸಂಪೂರ್ಣವಾಗಿ ಚಾರ್ಜ್ ಆಗಲು ಸುಮಾರು 8 ಗಂಟೆಗಳ ಸಮಯ ತೆಗೆದುಕೊಳ್ಳುತ್ತಿತ್ತು. ಅಂದಿನ ಕಾಲಕ್ಕೆ ಇದು ಅತ್ಯಾಧುನಿಕ ತಂತ್ರಜ್ಞಾನವಾಗಿತ್ತು.
ಸೋಲಿಗೆ ಕಾರಣವೇನು?
ಅಂದು ಈ ಕಾರ್ ಮಾರುಕಟ್ಟೆಯಲ್ಲಿ ನೆಲಕಚ್ಚಲು ಪ್ರಮುಖ ಕಾರಣವೆಂದರೆ ಮೂಲಸೌಕರ್ಯದ ಕೊರತೆ. ಅಂದು ಚಾರ್ಜಿಂಗ್ ಸ್ಟೇಷನ್ಗಳ ಕಲ್ಪನೆಯೇ ಇರಲಿಲ್ಲ. ಅಲ್ಲದೆ ಜನರಿಗೆ ಅಂಬಾಸಿಡರ್ನಂತಹ ಬಲಿಷ್ಠ ಮತ್ತು ದೊಡ್ಡ ಕಾರುಗಳ ಮೇಲೆ ಪ್ರೀತಿ ಹೆಚ್ಚಿತ್ತು. ಹೀಗಾಗಿ ಜನರು ಈ ಪುಟ್ಟ ಎಲೆಕ್ಟ್ರಿಕ್ ಕಾರಿನತ್ತ ಆಸಕ್ತಿ ತೋರಲಿಲ್ಲ. ಇದರ ಪರಿಣಾಮವಾಗಿ ದೇಶಾದ್ಯಂತ ಕೇವಲ 100 ಯುನಿಟ್ಗಳು ಕೂಡ ಮಾರಾಟವಾಗಲಿಲ್ಲ. ಇದರಿಂದಾಗಿ ಕಂಪನಿಯು ಅನಿವಾರ್ಯವಾಗಿ ಉತ್ಪಾದನೆಯನ್ನು ಸ್ಥಗಿತಗೊಳಿಸಬೇಕಾಯಿತು.
ಮಹೀಂದ್ರಾ ರೇವಾ ಮೂಲಕ ಮರುಜನ್ಮ
ಲವ್ ಬರ್ಡ್ ನಂತರ 2001ರಲ್ಲಿ ಮಹೀಂದ್ರಾ ಕಂಪನಿಯು ‘ರೇವಾ’ ಕಾರನ್ನು ಮಾರುಕಟ್ಟೆಗೆ ತಂದಿತು. ಇದು ಲವ್ ಬರ್ಡ್ಗಿಂತಲೂ ಹೆಚ್ಚಿನ ಯಶಸ್ಸು ಕಂಡರೂ, ಚಾರ್ಜಿಂಗ್ ವ್ಯವಸ್ಥೆಯ ಕೊರತೆಯಿಂದಾಗಿ ಆರಂಭದಲ್ಲಿ ನಿಧಾನಗತಿಯಲ್ಲೇ ಸಾಗಿತ್ತು. ಆದರೆ ಇಂದು ಇವಿ ಮಾರುಕಟ್ಟೆ ಬೆಳೆದು ನಿಲ್ಲಲು ಅಂದು ಈ ಕಾರುಗಳು ಹಾಕಿಕೊಟ್ಟ ಬುನಾದಿಯೇ ಕಾರಣ ಎಂಬುದು ಸುಳ್ಳಲ್ಲ.

