ಹೈದರಾಬಾದ್: ತೆಲಂಗಾಣದ ಹೈದರಾಬಾದ್’ನಲ್ಲಿ ಮನಕಲಕುವ ಘಟನೆಯೊಂದು ನಡೆದಿದೆ. ಫೋನ್ ನೋಡಬೇಡ ಮತ್ತು ವಿಡಿಯೋ ಗೇಮ್ ಆಡಬೇಡ ಎಂದು ತಂದೆ ಗದರಿಸಿದ್ದಕ್ಕೆ 12 ವರ್ಷದ ಬಾಲಕನೋರ್ವ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಬಂಜಾರಾ ಹಿಲ್ಸ್‌ನ ರೋಡ್ ನಂಬರ್ 12ರ ಸಯ್ಯದ್ ನಗರದ ನಿವಾಸಿ ಮೊಹಮ್ಮದ್ ಅಫಾನ್ ಖಾನ್ (12) ಆತ್ಮಹತ್ಯೆ ಮಾಡಿಕೊಂಡ ಬಾಲಕ. ಈತ ಖಾಸಗಿ ಶಾಲೆಯಲ್ಲಿ 5ನೇ ತರಗತಿ ಓದುತ್ತಿದ್ದನು.
ಘಟನೆ ಹಿನ್ನೆಲೆ
ಬಾಲಕನ ತಂದೆ ಇರ್ಫಾನ್ ಖಾನ್ ವಾಲ್ ಪೇಂಟಿಂಗ್ ಕೆಲಸ ಮಾಡಿಕೊಂಡಿದ್ದರು. ಅಫಾನ್‌ನ ತಾಯಿ ಆತ ಚಿಕ್ಕವನಿರುವಾಗಲೇ ಮೃತಪಟ್ಟಿದ್ದು, ಈಗ ಸಾಕುತಾಯಿಯ ಬಳಿ ಬೆಳೆಯುತ್ತಿದ್ದನು.ಅಫಾನ್‌ಗೆ ಚಿಕ್ಕಂದಿನಿಂದಲೂ ಹಠಮಾರಿ ಸ್ವಭಾವವಿತ್ತು. ಶಾಲೆಗೆ ಚಕ್ಕರ್ ಹಾಕಿ ಸದಾ ಮೊಬೈಲ್‌ನಲ್ಲಿ ವಿಡಿಯೋ ಗೇಮ್ ಆಡುತ್ತಿದ್ದನು. ಈ ವರ್ತನೆಯಿಂದಾಗಿ ಈ ಹಿಂದೆಯೇ ಆತನನ್ನು ಮೂರು ಶಾಲೆಗಳಿಗೆ ಬದಲಾಯಿಸಲಾಗಿತ್ತು.
ದುರಂತ: ಫೆಬ್ರವರಿ 24ರ ಮಂಗಳವಾರದಂದು, ಮೊಬೈಲ್ ಬಳಸದಂತೆ ತಂದೆ ಮಗನಿಗೆ ಬುದ್ಧಿ ಹೇಳಿ ಗದರಿಸಿದ್ದರು. ನಂತರ ತಂದೆ-ತಾಯಿ ಇಬ್ಬರೂ ಸಂಬಂಧಿಕರ ಅಂತ್ಯಕ್ರಿಯೆಗೆ ಹೋಗಿದ್ದರು. ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿ, ತಂದೆಯ ಮಾತಿನಿಂದ ಮನನೊಂದಿದ್ದ ಅಫಾನ್ ಸೀರೆಯಿಂದ ಫ್ಯಾನ್‌ಗೆ ನೇಣು ಹಾಕಿಕೊಂಡಿದ್ದಾನೆ.ತಂದೆಯ ದೂರಿನ ಮೇರೆಗೆ ಬಂಜಾರಾ ಹಿಲ್ಸ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಪೋಷಕರೇ ಗಮನಿಸಿ: ಇಂದಿನ ದಿನಗಳಲ್ಲಿ ಮಕ್ಕಳಲ್ಲಿ ಮೊಬೈಲ್ ವ್ಯಸನ ಮತ್ತು ಮಾನಸಿಕ ಒತ್ತಡ ಹೆಚ್ಚಾಗುತ್ತಿರುವುದು ಆತಂಕಕಾರಿ ವಿಷಯವಾಗಿದೆ. ಪೋಷಕರು ಮಕ್ಕಳೊಂದಿಗೆ ಪ್ರೀತಿಯಿಂದ ಸಂವಹನ ನಡೆಸುವುದು ಬಹಳ ಮುಖ್ಯ.

