HomeKarnatakaಪ್ರತಿ ವಾಹನಕ್ಕೆ ಕಮಿಷನ್ ರೂಪದಲ್ಲಿ 12 ಸಾವಿರ ಕಡಿತ: ಕೆಪಿಟಿಸಿಎಲ್ ವಾಹನ ಚಾಲಕರು, ಮಾಲೀಕರಿಂದ ಎಂಡಿಗೆ...

ಪ್ರತಿ ವಾಹನಕ್ಕೆ ಕಮಿಷನ್ ರೂಪದಲ್ಲಿ 12 ಸಾವಿರ ಕಡಿತ: ಕೆಪಿಟಿಸಿಎಲ್ ವಾಹನ ಚಾಲಕರು, ಮಾಲೀಕರಿಂದ ಎಂಡಿಗೆ ಮನವಿ

ಬೆಂಗಳೂರು: ವಾಹನ ಮಾಲೀಕ-ಚಾಲಕರ ಹಿತದೃಷ್ಟಿಯಿಂದ ಹಿಂದಿನ ಸರ್ಕಾರಿ ವ್ಯವಸ್ಥೆಯನ್ನು ಮರು ಜಾರಿಗೊಳಿಸುವುದು ಹಾಗೂ ಪ್ರಸ್ತುತ ಟೆಂಡರ್ ವ್ಯವಸ್ಥೆಯ ಕುರಿತು ಪರಿಶೀಲನೆ ನಡೆಸುವಂತೆ ಕೋರಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ(KPTCL) ವ್ಯವಸ್ಥಾಪಕ ನಿರ್ದೇಶಕರಿಗೆ ಕೆಪಿಟಿಸಿಎಲ್ ವಾಹನ ಮಾಲೀಕ-ಚಾಲಕರು ಮನವಿ ಸಲ್ಲಿಸಿದ್ದಾರೆ,

ಕೆಪಿಟಿಸಿಎಲ್‌ ನ ವಿವಿಧ ಕಚೇರಿಗಳಿಗೆ ವಾಹನಗಳನ್ನು ಒದಗಿಸುತ್ತಿರುವ ಎಲ್ಲಾ ವಾಹನ ಮಾಲೀಕ-ಚಾಲಕರು ತಮ್ಮ ಸಮಸ್ಯೆಗಳನ್ನು ವ್ಯವಸ್ಥಾಪಕ ನಿರ್ದೇಶಕರ ಗಮನಕ್ಕೆ ತಂದಿದ್ದಾರೆ.

ಪ್ರಸ್ತುತ ಕೆಪಿಟಿಸಿಎಲ್ ವತಿಯಿಂದ ಪ್ರತಿ ವಾಹನಕ್ಕೆ ತಿಂಗಳಿಗೆ ಸುಮಾರು ₹43,000 ರಿಂದ ₹44,000 ಪಾವತಿಸಲಾಗುತ್ತಿದೆ. ಆದರೆ ಟೆಂಡರ್ ಪಡೆದಿರುವ ಟ್ರಾವೆಲ್ ವರ್ಲ್ಡ್ ಕಂಪನಿಯು ವಾಹನ ಮಾಲೀಕ-ಚಾಲಕರಿಗೆ ಕೇವಲ ₹32,500 ಮಾತ್ರ ಪಾವತಿಸುತ್ತಿದ್ದು, ಪ್ರತಿ ವಾಹನಕ್ಕೆ ಸುಮಾರು ₹12,000 ಅನ್ನು ಕಮಿಷನ್ ರೂಪದಲ್ಲಿ ಉಳಿಸಿಕೊಳ್ಳುತ್ತಿದೆ. ಇದರಿಂದ ವಾಹನ ಮಾಲೀಕ-ಚಾಲಕರಿಗೆ ಆರ್ಥಿಕವಾಗಿ ತೀವ್ರ ತೊಂದರೆಯಾಗುತ್ತಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಳೆದ ಒಂದು ವರ್ಷದಿಂದ ಪೆಟ್ರೋಲ್ ಮತ್ತು ಡೀಸೆಲ್ ದರ, ವಾಹನ ವಿಮೆ (Insurance), ಫಿಟ್ನೆಸ್ ಸರ್ಟಿಫಿಕೇಟ್ (FC), ಪ್ಯಾನಿಕ್ ಬಟನ್ ಅಳವಡಿಕೆ ಹಾಗೂ ನಿರ್ವಹಣೆ, GPS ರೀಚಾರ್ಜ್, ವಾಹನ ದುರಸ್ತಿ ಮತ್ತು ಇತರ ನಿರ್ವಹಣಾ ವೆಚ್ಚಗಳು ಗಣನೀಯವಾಗಿ ಹೆಚ್ಚಾಗಿವೆ. ಈ ಹಿನ್ನೆಲೆಯಲ್ಲಿ ಹಲವಾರು ಬಾರಿ ಟ್ರಾವೆಲ್ ವರ್ಲ್ಡ್ ಕಂಪನಿಗೆ ಮಾಸಿಕ ಪಾವತಿಯನ್ನು ಹೆಚ್ಚಿಸುವಂತೆ ಮನವಿ ಸಲ್ಲಿಸಿದ್ದರೂ, ಇದುವರೆಗೆ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ಅಥವಾ ಕ್ರಮ ಕೈಗೊಳ್ಳಲಾಗಿಲ್ಲ.

ಇದಲ್ಲದೆ, ಟೆಂಡರ್ ದಾಖಲೆಯಲ್ಲಿ ವಾಹನ ಮಾಲೀಕ-ಚಾಲಕರಿಗೆ PF (ಭವಿಷ್ಯ ನಿಧಿ) ಹಾಗೂ ESI (ನೌಕರರ ರಾಜ್ಯ ವಿಮೆ) ಸೌಲಭ್ಯಗಳನ್ನು ಒದಗಿಸಬೇಕು ಎಂದು ಉಲ್ಲೇಖಿಸಲಾಗಿದೆ. ಆದರೆ ಕಳೆದ ಸುಮಾರು ನಾಲ್ಕು ವರ್ಷಗಳಿಂದ ನಮಗೆ ಈ ಸೌಲಭ್ಯಗಳು ದೊರೆತಿಲ್ಲ. ಈ ಹಿನ್ನೆಲೆಯಲ್ಲಿ ಟೆಂಡರ್ ಷರತ್ತುಗಳನ್ನು ಸರಿಯಾಗಿ ಅನುಷ್ಠಾನಗೊಳಿಸಲಾಗಿದೆಯೇ ಎಂಬುದರ ಕುರಿತು ಸಮಗ್ರ ಪರಿಶೀಲನೆ ನಡೆಸುವಂತೆ ತಮ್ಮಲ್ಲಿ ವಿನಂತಿಸುತ್ತೇವೆ.

ಪ್ರಸ್ತುತ ಟೆಂಡರ್ ವ್ಯವಸ್ಥೆಯಿಂದ ವಾಹನ ಮಾಲೀಕ-ಚಾಲಕರ ಆದಾಯ ಕಡಿಮೆಯಾಗಿದ್ದು, ವಾಹನ ನಿರ್ವಹಣಾ ವೆಚ್ಚಗಳು ನಿರಂತರವಾಗಿ ಹೆಚ್ಚುತ್ತಿರುವುದರಿಂದ ಜೀವನೋಪಾಯ ನಡೆಸುವುದು ಅತ್ಯಂತ ಕಷ್ಟಕರವಾಗಿದೆ.

ಬೇಡಿಕೆಗಳು

1. ಪ್ರಸ್ತುತ ವಾಹನ ಟೆಂಡರ್ ವ್ಯವಸ್ಥೆಯ ಕುರಿತು ಸಮಗ್ರ ಪರಿಶೀಲನೆ ನಡೆಸಬೇಕು.

2. ಹಿಂದೆ ಜಾರಿಯಲ್ಲಿದ್ದ ಸರ್ಕಾರಿ ವ್ಯವಸ್ಥೆ/ಯೋಜನೆಯನ್ನು ಮರು ಜಾರಿಗೊಳಿಸಿ, ವಾಹನ ಮಾಲೀಕ-ಚಾಲಕರಿಗೆ ನೇರವಾಗಿ ಅವಕಾಶ ಕಲ್ಪಿಸಬೇಕು.

3. ಟೆಂಡರ್ ದಾಖಲೆಯಲ್ಲಿ ಉಲ್ಲೇಖಿಸಿರುವ PF, ESI ಹಾಗೂ ಇತರ ಸೌಲಭ್ಯಗಳು ವಾಹನ ಮಾಲೀಕ-ಚಾಲಕರಿಗೆ ದೊರೆತಿವೆಯೇ ಎಂಬುದನ್ನು ಪರಿಶೀಲಿಸಿ, ಯಾವುದೇ ಉಲ್ಲಂಘನೆ ಕಂಡುಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು.

4. ವಾಹನ ನಿರ್ವಹಣೆಯ ಹೆಚ್ಚುತ್ತಿರುವ ವೆಚ್ಚಗಳನ್ನು ಪರಿಗಣಿಸಿ, ವಾಹನ ಮಾಲೀಕ-ಚಾಲಕರಿಗೆ ನ್ಯಾಯಯುತ ಮತ್ತು ಸಮರ್ಪಕ ಮಾಸಿಕ ಪಾವತಿಯನ್ನು ಖಚಿತಪಡಿಸಬೇಕು.

5. ವಾಹನ ಮಾಲೀಕ-ಚಾಲಕರ ಹಿತಾಸಕ್ತಿಯನ್ನು ಕಾಪಾಡುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಶೀಘ್ರವಾಗಿ ಕೈಗೊಳ್ಳಬೇಕು.

ಮನವಿಯನ್ನು ಸಹಾನುಭೂತಿಯಿಂದ ಹಾಗೂ ನ್ಯಾಯಯುತವಾಗಿ ಪರಿಗಣಿಸಿ, ಎಲ್ಲಾ ವಾಹನ ಮಾಲೀಕ-ಚಾಲಕರ ಹಿತವನ್ನು ಕಾಪಾಡುವ ನಿಟ್ಟಿನಲ್ಲಿ ಶೀಘ್ರ ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular