ಬೆಂಗಳೂರು: ಐಪಿಎಲ್ ಪಂದ್ಯ ಟಿಕೆಟ್ ಗಳನ್ನು ಕಾಳಸಂತೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದ 11 ಜನರನ್ನು ಸಿಸಿಬಿ ವಿಶೇಷ ದಳ ಪೊಲೀಸರು ಬಂಧಿಸಿದ್ದಾರೆ.
ಸಾಫ್ಟ್ವೇರ್ ಇಂಜಿನಿಯರ್ ಸತ್ಯನಾರಾಯಣ, ಜಗದೀಶ, ಹರ್ಷ, ವಿನಯ, ಶಾಹಿದ್, ನಿಖಿತ್, ಪುನೀತ್ ಸೇರಿದಂತೆ 11 ಜನರನ್ನು ಬಂಧಿಸಲಾಗಿದೆ. ಬಂಧಿತರಿಂದ 28 ಟಿಕೆಟ್, 8 ಮೊಬೈಲ್ ಫೋನ್ ವಶಕ್ಕೆ ಪಡೆಯಲಾಗಿದೆ. ಏಪ್ರಿಲ್ 5ರಂದು ಭಾನುವಾರ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್ಸಿಬಿ ಮತ್ತು ಸಿ.ಎಸ್.ಕೆ. ತಂಡಗಳ ನಡುವೆ ನಡೆದ ಐಪಿಎಲ್ ಪಂದ್ಯಕ್ಕೆ ಮೊದಲು ಆರೋಪಿಗಳು ಕಾಳಸಂತೆಯಲ್ಲಿ ಹೆಚ್ಚಿನ ಬೆಲೆಗೆ ಟಿಕೆಟ್ ಮಾರಾಟ ಮಾಡುತ್ತಿದ್ದರು.
ಕಾರ್ಯಾಚರಣೆ ನಡೆಸಿದ ಪೊಲೀಸರು ಅವರನ್ನು ಬಂಧಿಸಿದ್ದು, 7 ಪ್ರಕರಣ ದಾಖಲಿಸಲಾಗಿದೆ. ಕಬ್ಬನ್ ಪಾರ್ಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಟಿಕೆಟ್ ಮಾರಾಟ ಮಾಡುತ್ತಿದ್ದ 10 ಮಂದಿ ಬಂಧಿಸಲಾಗಿದ್ದು, ಬಂಧಿತರಿಂದ 7 ಮೊಬೈಲ್, ವಿವಿಧ ಬೆಲೆಯ 18 ಟಿಕೆಟ್ ಗಳ ವಶಕ್ಕೆ ಪಡೆಯಲಾಗಿದೆ. ಚಾಮರಾಜಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಐಪಿಎಲ್ ಟಿಕೆಟ್ ಮಾರಾಟಕ್ಕೆ ಮುಂದಾಗಿದ್ದ ಓರ್ವ ಆರೋಪಿ ಬಂಧಿಸಲಾಗಿದೆ. ಮೊಬೈಲ್ ಫೋನ್ ವಶಕ್ಕೆ ಪಡೆಯಲಾಗಿದೆ ಎಂದು ಹೇಳಲಾಗಿದೆ.

