“ಬ್ಯಾಂಕುಗಳಲ್ಲಿ 100 ದಿನಗಳ ಕಾಲ ವಿಶೇಷ ಅಭಿಯಾನ ಹಮ್ಮಿಕೊಳ್ಳವ ಮೂಲಕ ಸಾಮಾಜಿಕ ಭದ್ರತಾ ಯೋಜನೆಗಳಾದ ಪ್ರಧಾನಮಂತ್ರಿ ಜೀವನ್ ಜ್ಯೋತಿ ಭಿಮಾ ಯೋಜನೆ, ಪ್ರಧಾನಮಂತ್ರಿ ಸುರಕ್ಷಾ ಭಿಮಾ ಯೋಜನೆ ಮತ್ತು ಅಟಲ್ ಪೆನ್ಷನ್ ಯೋಜನೆ ನೋಂದಣಿಗೆ ಶ್ರಮ ವಹಿಸಬೇಕು” ಎಂದು ಚಿತ್ರದುರ್ಗ ಜಿಲ್ಲಾ ಪಂಚಾಯಿತಿ ಸಿಒಇ ಡಾ.ಎಸ್.ಆಕಾಶ್ ಸೂಚನೆ ನೀಡಿದ್ದಾರೆ.
ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ನೇತೃತ್ವದಲ್ಲಿ ನಡೆದ ಜಿಲ್ಲಾ ಸಲಹಾ ಸಮಿತಿ ಹಾಗೂ ಪರಿಶೀಲನಾ ಸಮಿತಿ ಸಭೆಯಲ್ಲಿ ಅವರು ಮಾತನಾಡಿ, “ರಾಜ್ಯದ ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಚಿತ್ರದುರ್ಗ ಜಿಲ್ಲೆಯಲ್ಲಿ ಸಾಮಾಜಿಕ ಭದ್ರತಾ ಯೋಜನೆಯಡಿ ನೋಂದಣಿಯಾದವರ ಪ್ರಮಾಣ ಅತ್ಯಂತ ಕಡಿಮೆಯಿದೆ. ಜಿಲ್ಲೆಯ ಬ್ಯಾಂಕ್‍ಗಳ ನಿರ್ಲಕ್ಷ್ಯ ಹಾಗೂ ವಿಳಂಬ ಧೋರಣೆಯ ಕ್ರಮಗಳಿಂದಾಗಿ ಕಡಿಮೆ ಪ್ರಮಾಣದ ನೋಂದಣಿಯಾಗಿದೆ” ಎಂದರು.
ಯಾವ-ಯಾವ ಯೋಜನೆಗಳು: ಪ್ರಧಾನಮಂತ್ರಿ ಜೀವನ್ ಜ್ಯೋತಿ ಬೀಮಾ ಯೋಜನೆಯಡಿ 18 ರಿಂದ 50 ವಯಸ್ಸಿನವರೆಗಿನ ನಾಗರಿಕರು ರೂ. 436ಗಳ ಮತ್ತು ಪ್ರಧಾನಮಂತ್ರಿ ಸುರಕ್ಷಾ ಬೀಮಾ ಯೋಜನೆಯಡಿ 18 ರಿಂದ 70 ವಯಸ್ಸಿನವರೆಗಿನ ನಾಗರೀಕರು ರೂ.20 ಪ್ರೀಮಿಯಂ ಹಣವನ್ನು ವಾರ್ಷಿಕವಾಗಿ ಪಾವತಿಸಿದರೆ, ಯಾವುದೇ ರೀತಿಯ ಮರಣ ಸಂಭವಿಸಿದರೂ ಅವರ ವಾರಸುದಾರಿಗೆ ಪ್ರತಿ ಯೋಜನೆಯಡಿ ರೂ.2 ಲಕ್ಷದವರೆಗೆ ವಿಮೆ ಸೌಲಭ್ಯ ದೊರೆಯಲಿದೆ.
ಬ್ಯಾಂಕ್ ಆಫ್ ಬರೋಡಾ ಜಿಲ್ಲೆಯ ಶಾಖೆಗಳಲ್ಲಿ ಸುಮಾರು 1.79 ಲಕ್ಷ ಅರ್ಹ ಖಾತೆದಾರರನ್ನು ಹೊಂದಿದೆ. ಆದರೆ ಸಾಮಾಜಿಕ ಭದ್ರತಾ ಯೋಜನೆಗಳಿಡಿ 1,150 ನೋಂದಣಿಗಳನ್ನು ಮಾತ್ರ ಮಾಡಿದೆ. ಇದೇ ರೀತಿ ಅಪೆಕ್ಸ್ ಬ್ಯಾಂಕ್‍ನಲ್ಲಿ 1.20 ಲಕ್ಷ ಖಾತೆಗಳಿದ್ದರೂ ಕೇವಲ 1,080 ನೋಂದಣಿ ಮಾಡಲಾಗಿದೆ ಎಂದು ಸಭೆಯಲ್ಲಿ ಚರ್ಚೆ ನಡೆಯಿತು.
“ಈ ಬ್ಯಾಂಕುಗಳು ಮುಂದಿನ 100 ದಿನಗಳ ಅಭಿಯಾನದಲ್ಲಿ, ಪ್ರತಿ ಶಾಖೆಯಲ್ಲಿ ದಿನ ಒಂದಕ್ಕೆ 10 ಸಾಮಾಜಿಕ ಭದ್ರತಾ ಯೋಜನೆಗಳ ನೋಂದಣಿ ಮಾಡುವ ಮೂಲಕ ಸುಮಾರು 10,000 ನೋಂದಣಿಗಳ ಗುರಿಯನ್ನು ಸಾಧಿಸಬೇಕು” ಎಂದು ಸಿಇಒ ಡಾ.ಎಸ್.ಆಕಾಶ್ ನಿರ್ದೇಶನ ನೀಡಿದರು.
ಸಾಮಾಜಿಕ ಭದ್ರತಾ ಯೋಜನೆಗಳಿಡಿ 21,865 ನೋಂದಣಿ ಮಾಡಿ ಪ್ರಥಮ ಸ್ಥಾನ ಪಡೆದ ಕರ್ನಾಟಕ ಗ್ರಾಮೀಣ ಬ್ಯಾಂಕ್, 11,392 ನೋಂದಣಿ ಮಾಡಿದ ಕೆನರಾ ಬ್ಯಾಂಕ್ ದ್ವಿತೀಯ ಸ್ಥಾನ ಪಡೆದಿದ್ದಕ್ಕಾಗಿ ಈ ಸಂದರ್ಭದಲ್ಲಿ ಡಾ.ಆಕಾಶ್ ಅಭಿನಂದನೆ ಸಲ್ಲಿಸಿದರು.
ಜೂನ್ ಮೊದಲ ವಾರದಲ್ಲಿ ನಡೆಯಲಿರುವ ಮುಂದಿನ ಪ್ರಗತಿ ಪರಿಶೀಲನಾ ಸಭೆಯೊಳಗೆ ಈ ಗುರಿ ತಲುಪದಿದ್ದರೆ, ಸಂಬಂಧಿಸಿದ ಬ್ಯಾಂಕ್ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ನಡವಳಿಯಲ್ಲಿ ದಾಖಲಿಸಿ ಆರ್.ಬಿ.ಐಗೆ ವರದಿ ಸಲ್ಲಿಸುವುದಾಗಿ ಎಚ್ಚರಿಕೆ ಕೊಟ್ಟರು.

