ಬೆಂಗಳೂರು: ಅಕ್ರಮವಾಗಿ ಅಳವಡಿಸಿದ್ದ ಬ್ಯಾನರ್ ತೆರವು ಮಾಡಿದ್ದಕ್ಕೆ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ, ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತಾ ಗೌಡ ಅವರನ್ನು ನಿಂದಿಸಿ, ಜೀವಬೆದರಿಕೆ ಹಾಕಿದ ಪ್ರಕರಣದ ಬೆನ್ನಲ್ಲೇ ನಟ ಝೈದ್ ಖಾನ್ ಕ್ಷಮೆ ಕೇಳಿದ್ದಾರೆ.
ಝೈದ್ ಖಾನ್ ಅಭಿನಯದ ಕಲ್ಟ್ ಸಿನಿಮಾದ ಈವೆಂಟ್ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರದ ಶಿಡ್ಲಘಟ್ಟದಲ್ಲಿ ಪ್ಲೆಕ್ಸ್, ಬ್ಯಾನರ್ ಗಳನ್ನು ಅಳವಡಿಸಲಾಗಿತ್ತು. ಅಕ್ರಮವಾಗಿ ಅಳವಡಿಸಿದ್ದ ಒಂದು ಬ್ಯಾನರ್ ತೆರವುಗೊಳಿಸಿದ ವಿಚಾರವಾಗಿ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಪೌರಾಯುಕ್ತೆ ಅಮೃತಾ ಅವರಿಗೆ ಕರೆ ಮಾಡಿ ನಿಂದಿಸಿ, ಜೀವಬೆದರಿಕೆ ಹಾಕಿದ್ದರು. ಈ ಪ್ರಕರಣ ಭಾರಿ ಸುದ್ದಿಯಾಗಿದ್ದು, ರಾಜೀವ್ ಗೌಡ ವಿರುದ್ಧ ಎರಡು ಎಫ್ಐಆರ್ ಕೂಡ ದಾಖಲಾಗಿದೆ. ಬಂಧನಕ್ಕಾಗಿ ಪೊಲೀಸರು ವಿಶೇಷ ತಂಡ ರಚಿಸಿದ್ದಾರೆ. ಆದರೆ ರಾಜೀವ್ ಗೌಡ ತಲೆಮರೆಸಿಕೊಂಡು ನಾಪತ್ತೆಯಾಗಿದ್ದಾರೆ.
ಈ ಎಲ್ಲಾ ಬೆಳವಣಿಗೆಗಳ ನಡುವೆ ಘಟನೆ ಬಗ್ಗೆ ನಟ ಝೈದ್ ಖಾನ್ ಪ್ರತಿಕ್ರಿಯೆ ನೀಡಿದ್ದಾರೆ. ಘಟನೆ ಬಗ್ಗೆ ನನ್ನ ಅಭಿಮಾನಿಗಳ ಪರವಾಗಿ ನಾನು ಕ್ಷಮೆ ಕೇಳುತ್ತೇನೆ. ಈ ಘಟನೆ ಬಗ್ಗೆ ನನಗೆ ತಿಳಿದಿರಲಿಲ್ಲ. ಘಟನೆ ನಡೆಯಬಾರದಿತ್ತು. ನಡೆದು ಹೋಗಿದೆ. ಅಭಿಮಾನಿಗಳ ಪರವಾಗಿ ನಾನು ಕ್ಷೆ ಕೋರುತ್ತೇನೆ. ಇಂತಹ ಘಟನೆ ಎಲ್ಲಿಯೂ ಆಗಬಾರದು ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

