ನೆದರ್‌ಲ್ಯಾಂಡ್ಸ್ ಪುರುಷರ ರಾಷ್ಟ್ರೀಯ ಫುಟ್‌ಬಾಲ್ ತಂಡದ ಮುಖ್ಯ ತರಬೇತುದಾರರಾಗಿ ಸ್ಪೇನ್ ದೇಶದ ಫುಟ್‌ಬಾಲ್ ದಿಗ್ಗಜ ಕ್ಸಾವಿ ಹೆರ್ನಾಂಡೆಜ್ ನೇಮಕಗೊಂಡಿದ್ದಾರೆ. ರೋನಾಲ್ಡ್ ಕೊಮನ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ 46 ವರ್ಷದ ಕ್ಸಾವಿ ಅವರನ್ನು ತರಬೇತುದಾರರನ್ನಾಗಿ ಆಯ್ಕೆ ಮಾಡಲಾಗಿದ್ದು, ಅವರು 2030ರ ಫಿಫಾ ವಿಶ್ವಕಪ್‌ವರೆಗೆ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಇದರೊಂದಿಗೆ ಕಳೆದ ಐದು ದಶಕಗಳಲ್ಲೇ ಡಚ್ ತಂಡದ ಹೊಣೆ ಹೊತ್ತ ಮೊದಲ ವಿದೇಶಿ ಕೋಚ್ ಎಂಬ ಹೆಗ್ಗಳಿಕೆಗೆ ಕ್ಸಾವಿ ಪಾತ್ರರಾಗಿದ್ದಾರೆ.
1978ರಲ್ಲಿ ಆಸ್ಟ್ರಿಯಾದ ಅರ್ನೆಸ್ಟ್ ಹ್ಯಾಪೆಲ್ ಅವರ ನಂತರ ನೆದರ್‌ಲ್ಯಾಂಡ್ಸ್ ತಂಡದ ಮುಖ್ಯ ತರಬೇತುದಾರರಾದ ಮೊದಲ ವಿದೇಶಿ ಕೋಚ್ ಕ್ಸಾವಿ ಅವರಾಗಿದ್ದಾರೆ. ಮುಂಬರುವ ದಿನಗಳಲ್ಲಿ ಅವರು ವರ್ಜಿಲ್ ವ್ಯಾನ್ ಡಿಜ್ಕ್, ಫ್ರಾಂಕಿ ಡಿ ಜೋಂಗ್, ಡೆನ್ಜೆಲ್ ಡಮ್‌ಫ್ರೈಸ್, ಮಿಕ್ಕಿ ವ್ಯಾನ್ ಡಿ ವೆನ್ ಸೇರಿದಂತೆ ಹಲವು ಪ್ರಮುಖ ಆಟಗಾರರೊಂದಿಗೆ ಕೆಲಸ ಮಾಡಲಿದ್ದಾರೆ.
ತಮ್ಮ ನೇಮಕದ ಕುರಿತು ಸಂತಸ ಹಂಚಿಕೊಂಡಿರುವ ಕ್ಸಾವಿ, ಡಚ್ ಫುಟ್‌ಬಾಲ್ ಜೊತೆ ತಮಗೆ ವಿಶೇಷ ನಂಟು ಇದೆ ಎಂದು ಹೇಳಿದ್ದಾರೆ. ಬಾರ್ಸಿಲೋನಾ ಅಕಾಡೆಮಿಯಲ್ಲಿ ಬೆಳೆದ ತಮಗೆ ಯೋಹಾನ್ ಕ್ರುಫ್, ರಿಕಾರ್ಡ್ ಮತ್ತು ಲೂಯಿಸ್ ವ್ಯಾನ್ ಗಾಲ್ ಅವರಂತಹ ಡಚ್ ಫುಟ್‌ಬಾಲ್ ದಿಗ್ಗಜರ ಪ್ರಭಾವ ಹೆಚ್ಚಾಗಿದೆ. ಹೀಗಾಗಿ ತಾವೂ ಕೂಡ ಡಚ್ ಫುಟ್‌ಬಾಲ್ ಸಂಸ್ಕೃತಿಯ ಭಾಗವೇ ಎಂದು ಅವರು ಬಣ್ಣಿಸಿದ್ದಾರೆ. ಮುಂಬರುವ ದಿನಗಳಲ್ಲಿ ಸ್ಥಳೀಯ ತರಬೇತುದಾರರನ್ನೂ ಒಳಗೊಂಡ ಸಹಾಯಕ ಸಿಬ್ಬಂದಿ ವರ್ಗವನ್ನು ರಚಿಸುವುದಾಗಿ ಅವರು ತಿಳಿಸಿದ್ದಾರೆ.
ಆಟಗಾರನಾಗಿ ಜಗತ್ತಿನ ಶ್ರೇಷ್ಠ ಮಿಡ್‌ಫೀಲ್ಡರ್‌ಗಳಲ್ಲಿ ಒಬ್ಬರೆನಿಸಿಕೊಂಡಿದ್ದ ಕ್ಸಾವಿ, 2010ರ ವಿಶ್ವಕಪ್‌ನಲ್ಲಿ ಸ್ಪೇನ್ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅಂದು ಫೈನಲ್‌ನಲ್ಲಿ ಸ್ಪೇನ್ ತಂಡವು ನೆದರ್‌ಲ್ಯಾಂಡ್ಸ್ ವಿರುದ್ಧವೇ ಜಯಗಳಿಸಿತ್ತು ಎಂಬುದು ವಿಶೇಷ. 17 ಋತುಗಳ ಕಾಲ ಬಾರ್ಸಿಲೋನಾ ಪರ ಆಡಿದ್ದ ಕ್ಸಾವಿ, ನಂತರ ಖತಾರ್‌ನ ಅಲ್-ಸಾದ್ ತಂಡದ ಮೂಲಕ ತರಬೇತುದಾರರಾಗಿ ವೃತ್ತಿಜೀವನ ಆರಂಭಿಸಿ ಹಲವು ಟ್ರೋಫಿಗಳನ್ನು ಗೆದ್ದುಕೊಟ್ಟಿದ್ದರು.
ನಂತರ 2021ರಲ್ಲಿ ಬಾರ್ಸಿಲೋನಾ ತಂಡದ ಮುಖ್ಯ ಕೋಚ್ ಆಗಿ ಮರಳಿದ ಅವರು, 2022-23ರ ಋತುವಿನಲ್ಲಿ ತಂಡಕ್ಕೆ ಸ್ಪ್ಯಾನಿಷ್ ಸೂಪರ್ ಕಪ್ ಹಾಗೂ ಲಾ ಲಿಗಾ ಟ್ರೋಫಿ ಗೆಲ್ಲಿಸಿಕೊಡುವಲ್ಲಿ ಯಶಸ್ವಿಯಾಗಿದ್ದರು. ಇದೀಗ ನೆದರ್‌ಲ್ಯಾಂಡ್ಸ್ ತಂಡವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ಮಹತ್ವದ ಜವಾಬ್ದಾರಿ ಅವರ ಹೆಗಲೇರಿದೆ.
We proudly present our new head coach. 🇳🇱⁰⁰Welcome, Xavi Hernández! 🧡#NothingLikeOranje #Xavi2030 pic.twitter.com/9aOpc9J53S
— OnsOranje (@OnsOranje) August 12, 2026
#Xavi2030 💬#NothingLikeOranje pic.twitter.com/0b5KGxqmph
— OnsOranje (@OnsOranje) August 12, 2026

