ಚೈತ್ರ ನವರಾತ್ರಿಯಂದು ಮಹಿಳೆ ಮುಟ್ತಾದ ಕಾರಣ ಹಬ್ಬ ಆಚರಿಸಲು ಸಾಧ್ಯವಾಗಿಲ್ಲ ಎಂದು ನೊಂದು ಮಹಿಳೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರ ಪ್ರದೇಶದ ಝಾನ್ಸಿಯಲ್ಲಿ ನಡೆದಿದೆ.
36 ವರ್ಷದ ಪ್ರಿಯಾಂಶ ಸೋನಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದವರು. ವಿಷ ಸೇವಿಸಿ ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅಷ್ಟರಲ್ಲಿ ಅವರು ಸಾವನ್ನಪ್ಪಿದ್ದರು.
ಪ್ರಿಯಾಂಶ ಹಾಗೂ ಮುಖೇಶ್ ದಂಪತಿಗೆ ಝನ್ಸಿ ಹಾಗೂ ಮಾನ್ವಿ ಎಂವ ಇಬ್ಬರು ಮಕ್ಕಳು. ಪ್ರತಿ ವರ್ಷವೂ ಚೈತ್ರ ನವರಾತ್ರಿ ಹಬ್ಬವನ್ನು ಪ್ರಿಯಾಂಶ ಬಹಳ ಉತ್ಸಾಹದಿಂದ ಸಂಭ್ರಮದಿಂದ ಆಚರಿಸುತ್ತಿದ್ದಳು. ಈಬಾರಿಯೂ ಹಬ್ಬಕ್ಕಾಗಿ ಸಾಕಷ್ಟು ಸಿದ್ಧತೆ ಮಾಡಿಕೊಂಡಿದ್ದಳು. ಪೂಜಾ ಸಾಮಗ್ರಿಗಳನ್ನು ಖರೀದಿಸಿದ್ದಳು. ಆದರೆ ಈಬಾರಿ ತಿಂಗಳ ರಜೆ ಕಾರಣಕ್ಕೆ ಆಕೆಗೆ ಹಬ್ಬ ಆಚರಿಸಲು ಸಾಧ್ಯವಾಗಿಲ್ಲ. ಇದರಿಂದ ಈ ಬಾರಿ ಹಬ್ಬ ಸಿಗಲಿಲ್ಲ ಎಂದು ಮಾನಸಿಕವಾಗಿ ತುಂಬಾ ಕೊರಗಿದ್ದಳು. ಪತಿ ಮುಖೇಶ್ ಸಾಕಷ್ಟು ಬಾರಿ ಸಮಾಧಾನ ಮಾಡಿದ್ದರೂ ಬೇಸರಿಸಿಕೊಳ್ಳುತ್ತಲೇ ಇದ್ದಳು. ಇದೊಂದು ನೈಸರ್ಗಿಕ ಪ್ರಕ್ರಿಯೆ. ಅಷ್ಟಕ್ಕೆ ನೊಂದುಕೊಳ್ಳುವ ಅಗತ್ಯವಿಲ್ಲ. ಮುಂದಿನ ಬಾರಿ ಆಚರಿಸೋಣ ಎಂದು ಹೇಳಿದ್ದರಂತೆ. ಆದರೂ ಮುಟ್ಟಿನ ಕಾರಣಕ್ಕೆ ಚೈತ್ರ ನವರಾತ್ರಿ ಸಿಗಲಿಲ್ಲ ಎಂದು ತೀವ್ರವಾಗಿ ಮನನೊಂದು ಪ್ರಿಯಾಂಶ ವಿಷ ಸೇವಿಸಿದ್ದಾಳೆ.
ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸಿಲ್ಲ. ಕೊತ್ವಾಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.