ಕಾರವಾರ: ವಿವಾಹಿತ ಮಹಿಳೆಯ ಹಿಂದೆ ಬಿದ್ದ ಯುವಕನೊಬ್ಬ, ತನ್ನನ್ನು ಮದುವೆಯಾಗುವಂತೆ ಪೀಡಿಸುತ್ತಿದ್ದು, ಆಕೆ ಒಪ್ಪದಿದ್ದಾಗ ನಡು ರಸ್ತೆಯಲ್ಲಿಯೇ ಇರಿದು ಕೊಂದಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನಲ್ಲಿ ನಡೆದಿದೆ.
ಯಲ್ಲಾಪುರ ನಿವಾಸಿ ರಂಜಿತಾ ಕೊಲೆಯಾದ ಮಹಿಳೆ. ರಫೀಕ್ ಮಹಿಳೆಯನ್ನು ಕೊಲೆಗೈದ ಯುವಕ. ರಂಜಿತಾಳಿಗೆ ಮದುವೆಯಾಗಿ ಒಂದು ಮಗು ಕೂಡ ಇದೆ. ಹತ್ತು ವರ್ಷಗಳ ಹಿಂದೆ ಪತಿ ವಿಚ್ಛೇಧನ ನೀಡಿದ್ದರಿಂದ ಯಲಾಪುರದಲ್ಲಿ ತಂದೆ-ತಾಯಿ ಹಾಗೂ ಅಣ್ಣನ ಜೊತೆ ವಾಸವಾಗಿದ್ದರು. ಸರ್ಕಾರಿ ಶಾಲೆಯೊಂದರಲ್ಲಿ ಬಿಸಿಯೂಟ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದರು.
ರಂಜಿತಾ ಕುಟುಂಬಕ್ಕೆ ರಫೀಕ್ ಕುಟುಂಬ ಪರಿಚಯವಿತ್ತು. ರಫೀಕ್ ಆಗಾಗ ರಂಜಿತಾಳ ಮನೆಗೂ ಬಂದು ಹೋಗುತ್ತಿದ್ದ. ರಂಜಿತಾಳನ್ನು ಪ್ರೀತಿಸುತ್ತಿದ್ದ ರಫೀಕ್, ತನ್ನನ್ನು ಮದುವೆಯಾಗುವಂತೆ ಒತ್ತಾಯಿಸಿದ್ದ. ಆದರೆ ರಂಜಿತಾ ಒಪ್ಪಿರಲಿಲ್ಲ. ಕೆಲ ದಿನಗಳಿಂದ ರಫೀಕ್ ರಂಜಿತಾಳಿಗೆ ತನ್ನನ್ನು ಮದುವೆಯಾಗಲೇಬೇಕು ಎಂದು ಬಲವಂತ ಮಡಿದ್ದ. ಇದಕ್ಕೆ ರಂಜಿತಾ ಮದುವೆಯಾಗಲ್ಲ ಎಂದು ಸ್ಪಷ್ಟವಾಗಿ ನಿರಾಕರಿಸಿದ್ದರು. ಈಗಾಗಲೇ ತಾನು ಮದುವೆಯಾಗಿ ಅನುಭವಿಸಿದ ನೋವು, ಸಂಕಷ್ಟಗಳೇ ಸಾಕು. ಮತ್ತೆ ಮದುವೆಯಾಗಲ್ಲ ಎಂದಿದ್ದರು.
ಇಂದು ಎಂದಿನಂತೆ ಶಾಲೆಯಿಂದ ಮನೆಗೆ ಹೋಗುತ್ತಿದ್ದ ರಂಜಿತಾಳನ್ನು ರಸ್ತೆ ಮಧ್ಯೆಯೇ ರಫೀಕ್ ಅಡ್ಡಗಟ್ಟಿದ್ದಾನೆ. ನನ್ನನ್ನು ಮದುವೆಯಾಗುತ್ತಿಯೋ ಇಲ್ಲವೋ? ಎಂದು ಮತ್ತೆ ಪ್ರಶ್ನಿಸಿದ್ದಾನೆ. ರಂಜಿತಾ ತಾನು ಮದುವೆಯಾಗಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ. ಇದರಿಂದ ಕೋಪಗೊಂಡ ರಫೀಕ್, ರಂಜಿತಾಳಿಗೆ ಚಾಕುವಿನಿಂದ ಮನಬಂದಂತೆ ಇರಿದು ಪರಾರಿಯಾಗಿದ್ದಾನೆ. ರಕ್ತದ ಮಡುವಲ್ಲಿ ಬಿದ್ದಿದ್ದ ರಂಜಿತಾಳನ್ನು ಸ್ಥಳೀಯರು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ರಂಜಿತಾ ಸಾವನ್ನಪ್ಪಿದ್ದಾರೆ.
ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ರಫೀಕ್ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.

