ಅಮೆರಿಕದಲ್ಲೊಂದು ವಿಲಕ್ಷಣ ಪ್ರಕರಣ: ಒಂದು ವರ್ಷದಿಂದ ಕಿರಾಣಿ ಅಂಗಡಿಯ ಸೈನ್ ಬೋರ್ಡ್ ನೊಳಗೆ ವಾಸಿಸ್ತಿದ್ದ ಮಹಿಳೆ…!

ಅಮೆರಿಕದಲ್ಲಿ ಮಹಿಳೆಯೊಬ್ಬರು ಕಿರಾಣಿ ಅಂಗಡಿಯ ಸೈನ್ ಬೋರ್ಡ್‌ನಲ್ಲಿ ಒಂದು ವರ್ಷ ಕಾಲ ಉಳಿದುಕೊಂಡಿದ್ದ ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದೆ. ತನ್ನ ವಿವೇಚನೆಯಿಂದ ಅಲ್ಲಿ ಬದುಕುವಲ್ಲಿ ಯಶಸ್ವಿಯಾಗಿದ್ದ ಆಕೆ ಇದ್ದ ಸ್ಥಳವು ಸಂಪೂರ್ಣವಾಗಿ ಅಗತ್ಯ ವಸ್ತುಗಳನ್ನು ಹೊಂದಿತ್ತು. ಅಲ್ಲಿ ವಿದ್ಯುತ್ ಸಂಪರ್ಕ ಸಹ ಇತ್ತು ಎಂಬುದು ಗಮನಾರ್ಹ.

ಮಿಚಿಗನ್ ನಲ್ಲಿ ನಡೆದಿರುವ ಈ ಘಟನೆಯಲ್ಲಿ ಫ್ಯಾಮಿಲಿ ಫೇರ್ ಹೆಸರಿನ ಅಂಗಡಿಯ ಮೇಲ್ಛಾವಣಿಯಲ್ಲಿದ್ದ ಕಿರಾಣಿ ಅಂಗಡಿಯ ಫಲಕವನ್ನು 34 ವರ್ಷದ ಮಹಿಳೆ ಆಕ್ರಮಿಸಿಕೊಂಡಿದ್ದರು. ನಿರಾಶ್ರಿತ ಮಹಿಳೆ ತ್ರಿಕೋನ ಜಾಗದಲ್ಲಿ ಉಳಿದುಕೊಂಡಿದ್ದು ಅದನ್ನು ಸಾಧ್ಯವಾದಷ್ಟು ತಮಗೆ ಆರಾಮದಾಯಕವಾಗಿಸಿಕೊಂಡಿದ್ದರು.

ಗುತ್ತಿಗೆದಾರರೊಬ್ಬರು ಮೇಲ್ಛಾವಣಿಯ ಮೇಲೆ ಹಬ್ಬಿದ್ದ ಬಳ್ಳಿಯನ್ನು ಪರಿಶೀಲಿಸಲು ತೆರಳಿದ ನಂತರ ಸುಮಾರು ಒಂದು ವರ್ಷಗಳ ಕಾಲ ಅಲ್ಲಿ ಅಜ್ಞಾತ ವಾಸ್ತವ್ಯದಲ್ಲಿದ್ದ ಮಹಿಳೆ ಪತ್ತೆಯಾದರು. ಬಳಿಕ ಈ ಪ್ರಕರಣದಲ್ಲಿ ಪೊಲೀಸರು ತನಿಖೆ ಮಾಡಿದ್ದು ಮಿಚಿಗನ್ ಮೂಲದ ನಿರಾಶ್ರಿತ ಮಹಿಳೆ ಒಂದು ವರ್ಷದಿಂದ ಕಿರಾಣಿ ಅಂಗಡಿಯ ಫಲಕದ ಸ್ಥಳವನ್ನು ಆಕ್ರಮಿಸಿಕೊಂಡಿರುವುದನ್ನು ಕಂಡುಕೊಂಡರು.

ಮಿಡ್ಲ್ಯಾಂಡ್ ಪೊಲೀಸ್ ಇಲಾಖೆಯ ಅಧಿಕಾರಿ, ನಿರಾಶ್ರಿತ ಮಹಿಳೆ ಉದ್ಯೋಗಿಯಾಗಿದ್ದಾಳೆ ಎಂದು ದೃಢಪಡಿಸಿದರು. ನಿಮಗೆ ಅಚ್ಚರಿಯಾಗುವಂತೆ ಆಕೆ ಇದ್ದ ಜಾಗದಲ್ಲಿ ಮಿನಿ ಡೆಸ್ಕ್, ಅವಳ ಬಟ್ಟೆ, ಕಾಫಿ ಮೇಕರ್, ಪ್ರಿಂಟರ್ ಮತ್ತು ಕಂಪ್ಯೂಟರ್ ಸೇರಿದಂತೆ ಮನೆಯಲ್ಲಿ ಹೊಂದಿರಬಹುದಾದ ವಸ್ತುಗಳು ಇದ್ದವು. ಆದರೆ ಆಕೆ ಅಲ್ಲಿಗೆ ಹೇಗೆ ಹೋಗುತ್ತಿದ್ದಳು ಎಂಬುದನ್ನ ಮಾತ್ರ ಮಹಿಳೆ ತಿಳಿಸಲಿಲ್ಲ.

ಮಹಿಳೆಗೆ ಆವರಣವನ್ನು ಖಾಲಿ ಮಾಡಲು ಹೇಳಿ ಆಕೆಗೆ ಬೇರೆಡೆ ವಸತಿ ಸೌಕರ್ಯವನ್ನು ಹುಡುಕಲು ಸಹಾಯ ಮಾಡುವುದಾಗಿ ತಿಳಿಸಲಾಯಯಿತಾದರೂ ಆಕೆ ಈ ಪ್ರಸ್ತಾಪವನ್ನು ನಯವಾಗಿ ನಿರಾಕರಿಸಿ ತನ್ನ ದಾರಿ ಹಿಡಿದಳು.

ಅಂಗಡಿ ಮಾಲೀಕರು ಮಹಿಳೆಯ ಮೇಲೆ ಕೇಸ್ ಹಾಕದಂತೆ ದಯೆ ತೋರಿದರು. ಸ್ಥಳವನ್ನು ಖಾಲಿ ಮಾಡಿದ ನಂತರ ಆಕೆ ಎಲ್ಲಿಗೆ ಹೋದಳು ಎಂಬುದು ತಿಳಿದಿಲ್ಲ ಎಂದು ಪೋಲೀಸರು ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read