ದಾವಣಗೆರೆ: ಜಿಲ್ಲೆಯ ಚನ್ನಗಿರಿ ತಾಲೂಕಿನ ತಿಪ್ಪಗೊಂಡನಹಳ್ಳಿ ನಿವಾಸಿ ಅನುಷಾ ಎಂಬುವವರು ಇಂಜೆಕ್ಷನ್ ಪಡೆದ ಕೆಲವೇ ಕ್ಷಣಗಳಲ್ಲಿ ಮೃತಪಟ್ಟ ಘಟನೆ ದಾವಣಗೆರೆಯಲ್ಲಿ ನಡೆದಿದೆ. ಹೃದಯ ಸಂಬಂಧಿ ಕಾಯಿಲೆಗಾಗಿ ಪ್ರತಿ ತಿಂಗಳು ಪಡೆಯುತ್ತಿದ್ದ ಚಿಕಿತ್ಸೆಯ ಭಾಗವಾಗಿ ಇಂದು ಬೆಳಗ್ಗೆ ಆಸ್ಪತ್ರೆಗೆ ಬಂದಿದ್ದ ಯುವತಿ, ಚಿಕಿತ್ಸೆಯ ಬಳಿಕ ಏಕಾಏಕಿ ಸಾವನ್ನಪ್ಪಿದ್ದಾರೆ. ಇದು ವೈದ್ಯರ ಮತ್ತು ಸಿಬ್ಬಂದಿಯ ಘೋರ ಎಡವಟ್ಟು ಎಂದು ಆರೋಪಿಸಿರುವ ಕುಟುಂಬಸ್ಥರು ಆಸ್ಪತ್ರೆಯ ಮುಂದೆ ಆಕ್ರೋಶ ವ್ಯಕ್ತಪಡಿಸಿದ್ದು, ಸಾವಿನ ಬಗ್ಗೆ ತೀವ್ರ ಶಂಕೆ ವ್ಯಕ್ತಪಡಿಸಿದ್ದಾರೆ.
ಹೌದು. ವೈದ್ಯರ ನಿರ್ಲಕ್ಷ್ಯ ಹಾಗೂ ಎಡವಟ್ಟಿನಿಂದಾಗಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ ಎಂಬ ಗಂಭೀರ ಆರೋಪ ದಾವಣಗೆರೆಯಲ್ಲಿ ಕೇಳಿಬಂದಿದೆ. ಚನ್ನಗಿರಿ ತಾಲೂಕಿನ ತಿಪ್ಪಗೊಂಡನಹಳ್ಳಿ ನಿವಾಸಿ ಅನುಷಾ (25) ಮೃತಪಟ್ಟ ದುರ್ದೈವಿ.
ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಅನುಷಾ ಅವರು ಚಿಕಿತ್ಸೆಗಾಗಿ ಪ್ರತಿ ತಿಂಗಳು ಇಂಜೆಕ್ಷನ್ ಪಡೆದುಕೊಳ್ಳುತ್ತಿದ್ದರು. ಅದರಂತೆ ಇಂದು ತಮ್ಮ ಕುಟುಂಬದವರ ಜೊತೆ ಚನ್ನಗಿರಿಯ ಖಾಸಗಿ ಆಸ್ಪತ್ರೆಗೆ ತೆರಳಿದ್ದರು. ಅಲ್ಲಿ ಇಂಜೆಕ್ಷನ್ ಪಡೆದುಕೊಂಡ ಕೆಲವೇ ಕ್ಷಣಗಳಲ್ಲಿ ಅನುಷಾ ಅವರ ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ.
ಚೆನ್ನಾಗಿಯೇ ಇದ್ದ ಯುವತಿ ಇಂಜೆಕ್ಷನ್ ನೀಡಿದ ಕೂಡಲೇ ಸಾವನ್ನಪ್ಪಿದ್ದಾಳೆ. ಇದು ವೈದ್ಯರ ಮತ್ತು ಆಸ್ಪತ್ರೆ ಸಿಬ್ಬಂದಿಯ ನಿರ್ಲಕ್ಷ್ಯದಿಂದಲೇ ನಡೆದಿದೆ” ಎಂದು ಮೃತರ ಸಂಬಂಧಿಕರು ಗಂಭೀರವಾಗಿ ಆರೋಪಿಸಿದ್ದಾರೆ. ಆಸ್ಪತ್ರೆಯ ಮುಂದೆ ಜಮಾಯಿಸಿದ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಆಸ್ಪತ್ರೆ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಸೂಕ್ತ ತನಿಖೆ ನಡೆಸಿ ನ್ಯಾಯ ಒದಗಿಸುವಂತೆ ಆಗ್ರಹಿಸಿದ್ದಾರೆ.ಸದ್ಯಕ್ಕೆ ಇದು ವೈದ್ಯಕೀಯ ಎಡವಟ್ಟಿನಿಂದ ನಡೆದ ಸಾವು ಎಂಬ ಶಂಕೆ ವ್ಯಕ್ತವಾಗಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

