“ಪವನ ಶಕ್ತಿ ಕೆಲಸವನ್ನು ರೈತರ ಜಮೀನುಗಳಿಗೆ ಸಮಸ್ಯೆಗಳಾಗದಂತೆ ನಿರ್ವಹಿಸುವುದರ ಜೊತೆಗೆ ಅವರ ಸಮಸ್ಯೆಗಳಿಗೆ ತಕ್ಷಣ ಸಂಬಂಧಿಸಿದ ಕಂಪನಿಯವರು ಸ್ಪಂದಿಸಬೇಕು” ಎಂದು ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಸೂಚಿಸಿದ್ದಾರೆ.
ಕೊಪ್ಪಳ ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ಕರ್ನಾಟಕ ನವೀಕರಿಸಬಹುದಾದ ಇಂಧನ ನೀತಿ 2022- 27ಅನ್ನು ಅನುಷ್ಠಾನಗೊಳಿಸಲು ಜಿಲ್ಲೆಯಲ್ಲಿ ಉಂಟಾಗುತ್ತಿರುವ ತೊಂದರೆಗಳ ಬಗ್ಗೆ ಚರ್ಚಿಸಲು ಅಧಿಕಾರಿಗಳು ಹಾಗೂ ವಿಂಡ್ ಎನರ್ಜಿ ಕಂಪನಿಗಳ ಮುಖ್ಯಸ್ಥರು/ ವ್ಯವಸ್ಥಾಪಕರೊಂದಿಗೆ ಸಚಿವರು ಸಭೆ ನಡೆಸಿದರು.
“ಗ್ರಾಮೀಣ ರಸ್ತೆಗಳಲ್ಲಿ 60 ರಿಂದ 70 ಟನ್ ಭಾರೀ ವಾಹನಗಳ ಸಂಚಾರದಿಂದ ರಸ್ತೆಗಳು ಹಾಳಾಗುತ್ತಿರುವುದರ ಜೊತೆಗೆ ರೈತರ ಜಮೀನುಗಳಿಗೂ ಸಮಸ್ಯೆಗಳಾಗುತ್ತಿವೆ ಮತ್ತು ಸಂಬಂಧಿಸಿದ ಕಂಪನಿಯವರು ರೈತರ ಸಮಸ್ಯೆಗಳಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎನ್ನುವ ದೂರುಗಳಿವೆ. ಅವುಗಳನ್ನು ಮರುಕಳಿಸದಂತೆ ನೋಡಿಕೊಳ್ಳಬೇಕು” ಎಂದರು.
“ನಮಗೆ ವಿಂಡ್ ಎನರ್ಜಿ ಬೇಕು. ಹಾಗಂತ ತಮ್ಮ ಮನಸ್ಸಿಗೆ ಬಂದಂತೆ ಮಾಡುವುದಲ್ಲ. ಜನರಿಗೆ ಏನಾದರೂ ಸಮಸ್ಯೆಗಳಾದರೂ ಅವರು ಮೊದಲು ಕೇಳುವುದು ನಮಗೆ, ನಿಮಗಲ್ಲ ಎಂದು ವಿಂಡ್ ಎನರ್ಜಿ ಕಂಪನಿಯ ಮುಖ್ಯಸ್ಥರು ಹಾಗೂ ವ್ಯವಸ್ಥಾಪಕರಿಗೆ” ಸಚಿವರು ಹೇಳಿದರು.
“ತಾವು ಎಷ್ಟು ಫ್ಯಾನ್‌ಗಳನ್ನು ಹಾಕಲು ಪರ್ಮಿಶನ್ ಪಡೆದಿದ್ದೀರಾ, ಎಷ್ಟು ಹಾಕುತ್ತಿದ್ದೀರಾ ಎನ್ನುವ ಮಾಹಿತಿಯನ್ನು ನೀಡಬೇಕು. ಇದಕ್ಕಾಗಿ ತಾಲ್ಲೂಕು ಮಟ್ಟದಲ್ಲಿ ತಹಶೀಲ್ದಾರರು, ತಾಲ್ಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳು, ಲೋಕೋಪಯೋಗಿ ಇಲಾಖೆ, ಪಿ.ಆರ್.ಇ.ಡಿ, ಪೊಲೀಸ್, ಜೆಸ್ಕಾಂ, ಅರಣ್ಯ ಸೇರಿದಂತೆ ಇತರೆ ವಿವಿಧ ಇಲಾಖೆಯ ಅಧಿಕಾರಿಗಳನ್ನೊಳಗೊಂಡ ಒಂದು ಸಮಿತಿಯನ್ನು ರಚಿಸಿ ಅವರು ಕಂಪನಿಯವರು ಪಡೆದ ಅನುಮತಿ ಪರಿಶೀಲಿಸುವುದರ ಜೊತೆಗೆ ಸಿಎಸ್‌ಆರ್ ಅನುದಾನದಲ್ಲಿ ಹಾಳಾದ ರಸ್ತೆಗಳನ್ನು ಎಷ್ಟು ಸರಿಯಾಗಿ ಮಾಡಿದ್ದಾರೆ ಎನ್ನುವ ಕುರಿತು ಮಾಹಿತಿ ಪಡೆಯುವಂತೆ” ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು.
“ಆದಷ್ಟು ಬೇಗನೆ ಇನ್ನೊಂದು ಸಭೆ ಕರೆಯಲಿದ್ದು, ಆ ಸಭೆಯಲ್ಲಿ ಇಲ್ಲಿಯವರೆಗೆ ಜಿಲ್ಲೆಯ ಎಲ್ಲೆಲ್ಲಿ ರೈತರ ದೂರುಗಳು ಬಂದಿವೆ ಎನ್ನುವ ಕುರಿತು ಮಾಹಿತಿ ಕೊಡಬೇಕು ಹಾಗೂ ಎಲ್ಲಾ ಕಂಪನಿಯವರು ಸಮಗ್ರ ಮಾಹಿತಿಯೊಂದಿಗೆ ತಪ್ಪದೆ ಸಭೆಗೆ ಹಾಜರಿರಬೇಕೆಂದು” ಸಚಿವರು ಹೇಳಿದರು.
ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ ಮಾತನಾಡಿ, “ವಿಂಡ್ ಎನರ್ಜಿಯ ಭಾರೀ ವಾಹನಗಳ ಸಂಚಾರದಿಂದ ರಸ್ತೆಗಳು ಎಷ್ಟು ಹಾಳಾಗಿವೆ ಎಂದರೆ ತುರ್ತು ಸಂದರ್ಭದಲ್ಲಿ ಅಂಬುಲೆನ್ಸ್ ಹೋಗಲಿಕ್ಕೂ ಆಗದ ಪರಿಸ್ಥಿತಿ ಬಂದಿದೆ. ವಾಹನಗಳು ಹೊಲದಲ್ಲಿ ಸಂಚರಿಸುತ್ತಿರುವುದರಿಂದ ಧೂಳಿನಿಂದ ಬೆಳೆಗಳು ಹಾಳಾಗಿವೆ. ಈ ಕುರಿತು ಮೊನ್ನೆ ನಾಗರಾಳ ಗ್ರಾಮದಲ್ಲಿ ಗಲಾಟೆ ಆಯಿತು” ಎಂದರು.
ಕೊಪ್ಪಳ ಸಂಸದ ಕೆ. ರಾಜಶೇಖರ ಬಸವರಾಜ ಹಿಟ್ನಾಳ ಮಾತನಾಡಿ, “ಜಿಲ್ಲೆಯಲ್ಲಿ ವಿಂಡ್ ಎನರ್ಜಿಗೆ 5,400 ಎಕರೆ ಜಮೀನು ಹೋಗುತ್ತದೆ. ಮುಂದೆ ಇದರ ಪರಿಣಾಮ ಏನಾಗುತ್ತದೆ ಎಂಬ ಕುರಿತು ನಾವು ವಿಚಾರ ಮಾಡಬೇಕಿದೆ. ಕಂಪನಿಯವರು ತಮ್ಮ ಕಂಡೀಶನ್‌ಗಳು ಏನಿವೆ ಎನ್ನುವುದನ್ನು ತಿಳಿಸಬೇಕು. ಇತ್ತೀಚೆಗೆ ಕವಲೂರಿನಲ್ಲಿ ಇದೇ ವಿಷಯಕ್ಕೆ ಗಲಾಟೆ ನಡೆಯಿತು. ರೈತರು ಬಂದು ಜಗಳ ಮಾಡಿದರು. ಅವರ ಸಮಸ್ಯೆಗಳಿಗೆ ಯಾಕೆ ತಾವು ಸರಿಯಾಗಿ ಸ್ಪಂದಿಸುತ್ತಿಲ್ಲ” ಎಂದು ಪ್ರಶ್ನೆ ಮಾಡಿದರು.

