HomeKarnatakaBIG NEWS : 'ಯಾವುದೇ ಕಾರಣಕ್ಕೂ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ' : ಸಿಎಂ ಸಿದ್ದರಾಮಯ್ಯ

BIG NEWS : ‘ಯಾವುದೇ ಕಾರಣಕ್ಕೂ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ’ : ಸಿಎಂ ಸಿದ್ದರಾಮಯ್ಯ

ದಾವಣಗೆರೆ :    ಯಾವುದೇ ಕಾರಣಕ್ಕೂ  ರಾಜ್ಯ  ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ  ಎಂದು    ಸಿಎಂ ಸಿದ್ದರಾಮಯ್ಯ  ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ದಾವಣಗೆರೆಯಲ್ಲಿ ಜಗದ್ಗುರು ಶ್ರೀ ಡಾ|ಪುರುಷೋತ್ತಮಾನಂದಪುರಿ ಮಹಾಸ್ವಾಮಿಗಳ ಪಟ್ಟಾಭಿಷೇಕ ರಜತ ಮಹೋತ್ಸವ ಮತ್ತು ರಾಷ್ಟ್ರೀಯ ಭಗೀರಥ ಮಹೋತ್ಸವ ಹಾಗೂ ಉಪ್ಪಾರರ ಬೃಹತ್ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

ಜಾತಿ ವ್ಯವಸ್ಥೆ ಬೇರೂರಲು ವೈಚಾರಿಕ ಶಿಕ್ಷಣದ ಕೊರತೆ ಕಾರಣ. ಚಲನರಹಿತವಾದ ಜಾತಿ ವ್ಯವಸ್ಥೆ ಬಲವಾಗಿ ಬೇರು ಬಿಟ್ಟಿರುವುದರಿಂದ ಬದಲಾವಣೆ ತರಲು ಇಂದಿಗೂ ಸಾಧ್ಯವಾಗಿಲ್ಲ. ದಾರ್ಶನಿಕರ ಪ್ರಯತ್ನದಿಂದಾಗಿ ಸ್ವಲ್ಪ ಸರಿಹೋಗುವ ಜಾತಿ ವ್ಯವಸ್ಥೆ ಕಾಲಾ ನಂತರ ಮತ್ತೆ ಯಥಾಸ್ಥಿತಿಗೆ ಮರಳುತ್ತದೆ. ಬಸವಾದಿ ಶರಣರು ‘ಇವನಾರವ, ಇವನಾರವ ಎನ್ನದೇ ಇವ ನಮ್ಮವ ಇವ ನಮ್ಮವ ಎಂದು ಭಾವಿಸುವಂತೆ ಹೇಳಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಉಪ್ಪಾರರು ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದಿರುವ ಸಮಾಜ. ಉಪ್ಪು ತಯಾರಿಸಿ ಮಾರಾಟ ಮಾಡುವ ವೃತ್ತಿಯಾಗಿದ್ದು, ಕೈಗಾರೀಕರಣವಾದ ನಂತರ ಕುಲಕಸುಬು ಬಿಡಬೇಕಾದ ಪರಿಸ್ಥಿತಿ ಉಂಟಾಗಿದೆ. ಇವರ ಕಸುಬಿಗೆ ಧಕ್ಕೆಯುಂಟಾದ ಮೇಲೆ ಸಮಾಜ ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದಿದೆ. ಶಿಕ್ಷಣ, ಆರ್ಥಿಕ ಶಕ್ತಿಯಿಂದ ವಂಚಿತರಾಗಿ ಉದ್ಯೋಗವಿಲ್ಲದೇ ಕೂಲಿ ಮಾಡುವ ಸ್ಥಿತಿ ಉಂಟಾಯಿತು. ಉಪ್ಪಾರ ಸಮಾಜ ಮಹಾತ್ಮಾ ಗಾಂಧಿಜಿಯವರು ಬ್ರಿಟಿಷರ ವಿರುದ್ಧ ಹೋರಾಡುವಾಗ ಉಪ್ಪಿನ ಸತ್ಯಾಗ್ರಹ ಮಾಡಿದರು, ಅದರಲ್ಲಿ ಉಪ್ಪಾರರ ಕೊಡುಗೆಯೂ ಅಪಾರವಾಗಿತ್ತು.

ಜಾತಿ ವ್ಯವಸ್ಥೆಯ ಕಾರಣದಿಂದ ಅಕ್ಷರ ಸಂಸ್ಕೃತಿಯಿಂದ ಎಲ್ಲಾ ಶೂದ್ರರೂ ವಂಚಿತರಾಗಿದ್ದಾರೆ. ಆರ್ಥಿಕ, ಸಮಾಜಿಕ ಅಸಮಾನತೆ ಇದ್ದರೆ ಅದಕ್ಕೆ ನಮ್ಮ ದೇಶದ ಜಾತಿ ವ್ಯವಸ್ಥೆ ಕಾರಣ. ಸಂವಿಧಾನದಲ್ಲಿ ಸಮ ಸಮಾಜ ನಿರ್ಮಾಣವಾಗಬೇಕೆಂದು ಹೇಳಿದೆ. ಶೋಷಣೆಗೊಳಗಾದ ಜನರಿಗೆ ಆರ್ಥಿಕ, ಸಮಾಜಿಕ ಶಕ್ತಿ ತುಂಬಿದಾಗ ಮಾತ್ರ ಸಮಸಮಾಜ ನಿರ್ಮಾಣ ಸಾಧ್ಯ.

ಬಸವಾದಿ ಶರಣರು ಕರ್ಮಸಿದ್ಧಾಂತವನ್ನು ವಿರೋಧಿಸಿದರು. ನನಗೆ ಕಾನೂನು ಶಿಕ್ಷಣ ಪಡೆದು, ವಕೀಲನಾಗಿ, ಈಗ ಮುಖ್ಯಮಂತ್ರಿಯಾಗುವ ಅವಕಾಶವನ್ನು ಅಂಬೇಡ್ಕರ್ ರವರ ಸಂವಿಧಾನ ನೀಡಿತು. ಶ್ರೀಮಠವು ಸಮುದಾಯದ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ಇಂಬು ನೀಡುತ್ತಿರುವುದು ಶ್ಲಾಘನೀಯ. ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂದು ನಾರಾಯಣಗುರುಗಳು ಬೋಧಿಸಿದರು. ಮನುಷ್ಯ ಮನುಷ್ಯರನ್ನು ಪ್ರೀತಿಸಬೇಕು ಎಂದು ಬಸವಣ್ಣನವರು ಪ್ರತಿಪಾದಿಸಿದರು.

ಸಮುದಾಯಗಳು ಸೂಕ್ತ ರೀತಿಯಲ್ಲಿ ಅಭಿವೃದ್ಧಿ ಹೊಂದಬಾರದೆಂಬ ಉದ್ದೇಶದಿಂದ ದಾರಿ ತಪ್ಪಿಸುವವರು ಬಹಳಷ್ಟಿದ್ದಾರೆ. ಚರಿತ್ರೆ ತಿಳಿದಿರುವವರು ಮಾತ್ರ ಭವಿಷ್ಯ ನಿರ್ಮಿಸಲು ಸಾಧ್ಯ. ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಶಕ್ತಿ ತುಂಬಿದಾಗ ಮಾತ್ರ ದೇಶಕ್ಕೆ ಬಂದ ಸ್ವಾತಂತ್ರ್ಯ ಸಾರ್ಥಕವಾಗುತ್ತದೆ. ಶ್ರೇಷ್ಠತೆ ಎಂಬುದು ಜಾತಿಯಿಂದ ಬರುವುದಲ್ಲ. ಅದು ನಮ್ಮ ಶಿಕ್ಷಣ, ಪರಿಶ್ರಮದಿಂದ ಬರುತ್ತದೆ.

ತಳಮಟ್ಟದ ಜನರಿಗೆ ಉಪಯೋಗವಾಗುವ ಗ್ಯಾರಂಟಿ ಯೋಜನೆಗಳನ್ನು ಕೆಲವರು ಟೀಕಿಸಿದರು. ಆದರೆ ರಾಜ್ಯದ ಮಹಿಳೆಯರು ಜೂನ್ 11 ರಿಂದ ಸಾರಿಗೆ ಬಸ್ಸುಗಳಲ್ಲಿ 150 ಕೋಟಿ ಬಾರಿ ಉಚಿತವಾಗಿ ಪ್ರಯಾಣಿಸಿದ್ದಾರೆ. ಇಂತಹ ಜನಪರ ಯೋಜನೆಗಳ ಬಗ್ಗೆ ಇಚ್ಛಾಶಕ್ತಿ ತೋರದ ಪಕ್ಷಗಳು, ಮೊದಲಿಗೆ ಯೋಜನೆಗಳನ್ನು ಜಾರಿ ಮಾಡಿ ನಂತರ ಸ್ಥಗಿತಗೊಳಿಸುತ್ತಾರೆ ಎಂದು ಟೀಕಿಸುತ್ತಾರೆ. ಆದರೆ ಈ ಯೋಜನೆಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ. ರಾಜ್ಯದ 4.5 ಕೋಟಿ ಜನರಿಗೆ ಗ್ಯಾರಂಟಿ ಯೋಜನೆಗಳು ತಲುಪುತ್ತಿವೆ.

ಉಪ್ಪಾರ ಸಮಾಜಕ್ಕೆ ಜಗದ್ಗುರು ಶ್ರೀ ಡಾ|| ಪುರುಷೋತ್ತಮಾನಂದಪುರಿ ಮಹಾಸ್ವಾಮಿಗಳು ಬಹಳಷ್ಟು ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ. ಸರ್ಕಾರದ ವತಿಯಿಂದ ಭಗೀರಥ ಜಯಂತಿ ಆಚರಣೆ ಹಾಗೂ ಭಗೀರಥ ಮಂಡಳಿ ಸ್ಥಾಪನೆಯಾಗಿದ್ದರೆ ಅದಕ್ಕೆ ಸ್ವಾಮೀಜಿಯವರು ಕಾರಣ. ಸಂಸ್ಥೆಗೆ ಸ್ವಾಮೀಜಿಗಳ ಜಮೀನು ಕೊಡಬೇಕೆಂದು ಮನವಿ ಮಾಡಿದ್ದಾರೆ. ಈ ಬಗ್ಗೆ ಸಂಬಂಧಪಟ್ಟವರೊಂದಿಗೆ ಚರ್ಚಿಸಿ ತೀರ್ಮಾನ ಮಾಡಲಾಗುವುದು ಎಂದರು.

 

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular